‘ಅಂಬೇಡ್ಕರ್‌ ಜಯಂತಿ ಮಾಡ್ತೀಯಾ?’: ದಲಿತ ಯುವಕನ ಭೀಕರ ಹತ್ಯೆ

ಹತ್ಯೆಯಾದ ದಲಿತ ಯುವಕ ಅಕ್ಷಯ್ ಭಲೇರಾವ್ (PC: The Quint)


ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬೋಂಧರ್ ಹವೇಲಿ ಗ್ರಾಮದಲ್ಲಿ ಜೂನ್ 1ರಂದು ಅಕ್ಷಯ್ ಭಲೇರಾವ್ ಎಂಬ ದಲಿತ ಯುವಕನ ಮೇಲೆ ದೊಣ್ಣೆ ಮತ್ತು ಕತ್ತಿಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಘಟನೆ ಸಂಬಂಧ ಅಕ್ಷಯ್ ಅವರ ಹಿರಿಯ ಸಹೋದರ ಆಕಾಶ್ ನೀಡಿರುವ ದೂರಿನ ಮೇರೆಗೆ ನಾಂದೇಡ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಾಗಿದೆ.

ಸಹೋದರರಾದ ಅಕ್ಷಯ್ ಮತ್ತು ಆಕಾಶ್ ಅಂದು ಸಂಜೆ ಗ್ರಾಮದ ಕಿರಾಣಿ ಅಂಗಡಿಗೆ ಹೋಗಿದ್ದಾಗ, ಅಕ್ಷಯ್ ಅವರಿಗೆ ಸವರ್ಣೀಯ ಜಾತಿಯ ಗುಂಪಿನ ಜನರು ಜಾತಿ ನಿಂದನೆ ಮಾಡಲಾರಂಭಿಸಿದರು, ನಂತರ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಂದು ಮುಖ್ಯರಸ್ತೆಯ ಮೂಲಕ ಹಾದು ಹೋಗುತ್ತಿದ್ದ ಮರಾಠಾ ಮದುಮಗನ ಮದುವೆಯ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ಇದ್ದರು. ಡಿಜೆ ಮ್ಯೂಸಿಕ್‌ ಹಾಕಲಾಗಿತ್ತು. ಅರಚಾಡುತ್ತಾ ಕುಣಿಯುತ್ತಿದ್ದರು. ಮೆರವಣಿಗೆಯಲ್ಲಿದ್ದ ಕೆಲವು ಜನರು ಕತ್ತಿಗಳನ್ನು, ಕೋಲುಗಳನ್ನು ಝಳಪಿಸುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಿರಾಣಿ ಅಂಗಡಿಯ ಬಳಿ ಅಕ್ಷಯ್ ಮತ್ತು ಆಕಾಶ್‌ ಅವರನ್ನು ಈ ಜಾತಿವಾದಿಗಳ ಗುಂಪು ಎದುರಾಗಿತ್ತು. ಅದರಲ್ಲಿದ್ದ ಒಬ್ಬಾತ ದಲಿತ ಸಹೋದರರಿಗೆ ಜಾತಿ ನಿಂದನೆ ಮಾಡಲು ಪ್ರಾರಂಭಿಸಿದನು. “ಇವರಿಬ್ಬರನ್ನು ಕೊಲ್ಲಬೇಕು, ಅಂಬೇಡ್ಕರ್‌ ಜಯಂತಿ ಆಚರಿಸಲು ಧೈರ್ಯ ಮಾಡ್ತೀರಾ?” ಎಂದನು.

ಇದಾದ ನಂತರ ದುಷ್ಕರ್ಮಿಗಳ ಗುಂಪು ಅಕ್ಷಯ್‌ ಮೇಲೆ ಮುಗಿ ಬಿದ್ದು ಒದೆಯಲು ಆರಂಭಿಸಿತು. ಕೋಲುಗಳಿಂದ ಥಳಿಸಿತು. ಒಬ್ಬಾತ ಪದೇ ಪದೇ ಕತ್ತಿಯಿಂದ ಹಲ್ಲೆ ಮಾಡಲಾರಂಭಿಸಿದ. ಇತರರು ಅಕ್ಷಯ್ ಅವರ ಕೈ ಮತ್ತು ಕಾಲುಗಳನ್ನು ಬಿಗಿಯಾಗಿ ಹಿಡಿದರು. ಇದರಿಂದಾಗಿ ಅಕ್ಷಯ್‌ ತಕ್ಷಣ ಸಾವನ್ನಪ್ಪಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸ್ಥಳದಲ್ಲಿದ್ದ ಆಕಾಶ್ ಹಾಗೂ ಅವರ ತಾಯಿಗೂ ಥಳಿಸಿದ್ದಾರೆ. ಅವರಿಗೂ ಗಾಯಗಳಾಗಿವೆ. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ಯ ಸೆಕ್ಷನ್‌ 3(1)(ಆರ್‌), 3(1)(ಎಸ್‌), 3(2)(ವಿಎ), ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 143, 147, 148, 149, 302, 307, 324, 323, 294 ಮತ್ತು ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ 4, 25, 27ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂತೋಷ್ ತಿಡ್ಕೆ, ದತ್ತ ತಿಡ್ಕೆ, ಕೃಷ್ಣ ತಿಡ್ಕೆ, ನೀಲಕಂಠ ತಿಡ್ಕೆ, ನಾರಾಯಣ ತಿಡ್ಕೆ, ಶಿವಾಜಿ ತಿಡ್ಕೆ, ಮಹಾದು ತಿಡ್ಕೆ, ಬಾಬುರಾವ್ ತಿಡ್ಕೆ ಮತ್ತು ಬಾಲಾಜಿ ಮುಂಗಲ್ ಅವರನ್ನು ಆರೋಪಿಗಳೆಂದು ಎಫ್ಐಆರ್‌ನಲ್ಲಿ ಹೆಸರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಯುವ ಪ್ಯಾಂಥರ್‌ನ ಅಧ್ಯಕ್ಷ ರಾಹುಲ್ ಪ್ರಧಾನ್ ಪ್ರತಿಕ್ರಿಯಿಸಿ, “ಬೊಂಧರ್ ಗ್ರಾಮವು ಬೌದ್ಧ ನಿವಾಸಿಗಳ ವಿರುದ್ಧದ ಅಪರಾಧಗಳಿಗೆ ಕುಖ್ಯಾತವಾಗಿದೆ. ಪ್ರಬಲ ಮರಾಠ ಸಮುದಾಯದ ವಿರೋಧದಿಂದಾಗಿ ಕಳೆದ 40-45 ವರ್ಷಗಳಿಂದ ಗ್ರಾಮದಲ್ಲಿ ಬೌದ್ಧ ಸಮುದಾಯದವರು ಅಂಬೇಡ್ಕರ್ ಜಯಂತಿಯಂದು ಮೆರವಣಿಗೆ ನಡೆಸಲು ಸಾಧ್ಯವಾಗುತ್ತಿಲ್ಲ” ಎಂದು ‘ದಿ ಕ್ವಿಂಟ್‌’ ಜಾಲತಾಣಕ್ಕೆ ತಿಳಿಸಿದ್ದಾರೆ.

ಬೊಂಧರ್ ಹವೇಲಿ ಗ್ರಾಮದಲ್ಲಿ ಶೇ.30ಕ್ಕಿಂತ ಹೆಚ್ಚು ದಲಿತರಿದ್ದಾರೆ.

ದಾಳಿಯ ಬಗ್ಗೆ ತಿಳಿದ ತಕ್ಷಣ ಗ್ರಾಮಕ್ಕೆ ಆಗಮಿಸಿದ ಪ್ರಧಾನ್, “ಈ ವರ್ಷ ಬೌದ್ಧರು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿದ ಕಾರಣಕ್ಕಾಗಿ ಮರಾಠರು ಆಕ್ರೋಶಗೊಂಡಿದ್ದಾರೆ. ಅಕ್ಷಯ್ ಅವರು ಅಂಬೇಡ್ಕರ್‌ ಜಯಂತಿ ಆಯೋಜನೆಯಲ್ಲಿ ಮುಂಚೂಣಿಯಲ್ಲಿದ್ದರು. ಅದಕ್ಕಾಗಿಯೇ ಅವರನ್ನು ಟಾರ್ಗೆಟ್ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

1 Comments

  1. https://youtu.be/1GnhhaGM15Y

    *₹2000/- ಪಡೆಯುವ ಮಹಿಳೆರಯರಿಗೆ ಆನ್ ಲೈನ್ ಅರ್ಜಿ ಪ್ರಾರಂಭ|| ಗೃಹಲಕ್ಷ್ಮಿ ಯೋಜನೆ|| Apply Online||*

    *ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ಪ್ ಗ್ರೂಪ್ ಸೇರಿರಿ*
    👇👇👇👇👇
    https://chat.whatsapp.com/LWgzbMxvNXt5cW8uNkxw1b

    ReplyDelete
Previous Post Next Post

Ads

Ads

نموذج الاتصال

×