ಒಡಿಶಾದ ಭೀಕರ ಸರಣಿ ರೈಲು ಅಪಘಾತ ಘಟನೆಗೆ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಪ್ರಕ್ರಿಯೆಯಲ್ಲಾದ ಲೋಪವೇ ಕಾರಣ ಎಂದು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಹೇಳಿದ್ದಾರೆ. ಆದರೆ ತುಮಕೂರಿನ ಬಿಜೆಪಿ ನಾಯಕಿ ಶಕುಂತಲಾ ಎಸ್ ಎನ್ನುವವರು ಈ ದುರಂತಕ್ಕೆ ಮಸೀದಿ ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದು, ಸಧ್ಯ ಅದು ವೈರಲ್ ಆಗುತ್ತಿದೆ. ಈ ಪೋಸ್ಟ್ ಹಾಕಿರುವ ತುಮಕೂರಿನ ಮಹಿಳೆ ಯಾರೆಂದು ಒಡಿಶಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ತುಮಕೂರಿನ ಬಿಜೆಪಿ ನಾಯಕಿ ಶಕುಂತಲಾ ಎಸ್ ಎನ್ನುವವರು ಈ ಘಟನೆಗೆ ಮಸೀದಿ ಪಕ್ಕದಲ್ಲಿ ಇರುವುದು ಕಾರಣ ಎಂದು ಬಿಂಬಿಸುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಕೆಲವರು ಒಡಿಶಾ ಬಾಲಸೋರ್ ರೈಲು ದುರಂತಕ್ಕೆ ಜಿಹಾದಿಗಳು ಕಾರಣ ಎಂದು ಘಟನೆ ನಡೆದ ಸಮೀಪವಿರುವ ಮಸೀದಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಬಿಜೆಪಿ ನಾಯಕಿ ಶಕುಂತಲಾ ಎಸ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಒಡಿಶಾ ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಒಡಿಶಾ ಪೊಲೀಸರು, ಮಸೀದಿ ಫೋಟೋ ಹರಿಬಿಟ್ಟ ಮಹಿಳೆ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಕರ್ನಾಟಕ ಪೊಲೀಸರಿಂದ ಮಹಿಳೆಯ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಒಡಿಶಾ ಪೊಲೀಸರು ಈ ಸುಳ್ಳು ಸುದ್ದಿ ಬಗ್ಗೆ ಟ್ವಿಟ್ಟರ್ ಮೂಲಕ ಎಚ್ಚರಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
”ರೈಲು ದುರಂತದ ಬಗ್ಗೆ ಕೇಂದ್ರ ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ. ಯಾರು ಕೊಡ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದು . ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಸುಳ್ಳು ಪೋಸ್ಟ್ ಮಾಡಿರುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಒಡಿಶಾದ ಭೀಕರ ರೈಲು ದುರಂತಕ್ಕೆ ಮುಸ್ಲಿಂ ಸಮುದಾಯ ಕಾರಣವೆಂದು ಘಟನೆ ಸಮೀಪದಲ್ಲಿರುವ ಮಸೀದಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಕೋಮು ಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಗಳು ನಡೆಯುತ್ತಿದ್ದು, ಇದರ ಮೇಲೆ ಒಡಿಶಾ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಈ ರೀತಿ ಕೋಮು ಸೌಹಾರ್ದತೆಯನ್ನು ಕೆಡಿಸುವ ಪ್ರಯತ್ನ ಮಾಡಿರುವ ತುಮಕೂರಿನ ಬಿಜೆಪಿ ನಾಯಕಿ ಶಕುಂತಲಾ ಎಸ್ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.