ಅತ್ಯಾಚಾರ ಸಂತ್ರಸ್ತೆಗೆ ಕುಜದೋಷವಿದೆಯೇ ಎಂದು ಮೂರು ವಾರಗಳಲ್ಲಿ ಪರೀಕ್ಷಿಸಿ ನಿರ್ಧರಿಸುವಂತೆ ಲಕ್ನೋ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥರಿಗೆ ಸೂಚಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಶನಿವಾರ ತಡೆ ನೀಡಿದೆ.
ಹೈಕೋರ್ಟ್‌ನ ಲಕ್ನೋ ಪೀಠ ನೀಡಿದ ಆದೇಶವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಜ್ಯೋತಿಷ್ಯವನ್ನು ತರುವ ಅಗತ್ಯವೇನಿದೆ ಎಂದು ಪ್ರಶ್ನಿಸಿದೆ.
ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರ ಪೀಠವು ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಅಲಹಾಬಾದ್ ಹೈಕೋರ್ಟ್ ಆದೇಶವು ಸಂಪೂರ್ಣವಾಗಿ ಸಂದರ್ಭವನ್ನು ಮೀರಿ ನಿಂತಿದೆ. ಪ್ರಕರಣದಲ್ಲಿ ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರತಿಕ್ರಿಯಿಸಿ, ಈ ಆದೇಶ ಗೊಂದಲಕ್ಕೀಡಾಗುವಂತೆ ಇದೆ. ಅದನ್ನು ತಡೆಹಿಡಿಯಬಹುದು ಎಂದು ಹೇಳಿದ್ದಾರೆ.
ಮದುವೆಯ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಜಾಮೀನು ಅರ್ಜಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಆರೋಪಿಯು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, “ಈ ಮಹಿಳೆಗೆ ಕುಜದೋಷವಿದೆ. ಹೀಗಾಗಿ ವಿವಾಹವಾಗಲು ಸಾಧ್ಯವಿಲ್ಲ” ಎಂದು ವಾದಿಸಿದ್ದಾರೆ.
ಕುಜದೋಷವೆಂಬ ಮೌಢ್ಯ
ಹಿಂದೂ ಜ್ಯೋತಿಷ್ಯದ ಪ್ರಕಾರ, ‘ಮಂಗಳಿ/ಮಾಂಗಲಿಕ’ ಮಂಗಳನ ಪ್ರಭಾವದ ಅಡಿಯಲ್ಲಿ ಜನಿಸಿದ ವ್ಯಕ್ತಿಯಾಗಿರುತ್ತಾರೆ’. ಅಂತಹ ವ್ಯಕ್ತಿಗಳನ್ನು ಮದುವೆಯಾದರೆ ಆಪತ್ತು. ಮದುವೆಯಾದವರು ತೊಂದರೆಗೆ ಸಿಲುಕುತ್ತಾರೆ ಎಂಬ ಮೌಢ್ಯ ಚಾಲ್ತಿಯಲ್ಲಿದೆ.
“ಕುಜ ದೋಷವನ್ನು ಅಂಗಾರಕ ದೋಷ ಮತ್ತು ಮಾಂಗಲ್ಯ ದೋಷ ಎಂದೂ ಕರೆಯುತ್ತಾರೆ. ಅಂದರೆ ಮಾಂಗಲ್ಯಕ್ಕೆ ಧಕ್ಕೆ ಬರುತ್ತದೆ. ಹಾಗಾಗಿ ಮದುವೆಗೂ ಮುನ್ನ ವಧು-ವರರ ಜಾತಕ ನೋಡಿ ದೋಷ ಇದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸಬೇಕು. ಯಾವುದೇ ಜಾತಕದಲ್ಲಿ ಮಂಗಳ 1ನೇ ಸ್ಥಾನದಲ್ಲಿದ್ದಾಗ ಪ್ರಧಾನ ಕುಜ ದೋಷ ಉಂಟಾಗುತ್ತದೆ” ಎಂಬ ಮೌಢ್ಯ ಬೆಳೆದು ನಿಂತಿದೆ.
ಏನಿದು ಆದೇಶ
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಬ್ರಿಜ್ ರಾಜ್ ಸಿಂಗ್ ಅವರ ಏಕಸದಸ್ಯ ಪೀಠವು ಮಹಿಳೆಯ ವಕೀಲರಿಗೆ ಈ ಆದೇಶವನ್ನು ನೀಡಿದ್ದರು. ತಮ್ಮ ಕುಂಡಲಿಯನ್ನು ಲಕ್ನೋ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗಕ್ಕೆ ಸಲ್ಲಿಸುವಂತೆ ಸೂಚಿಸಿ, ಮೂರು ವಾರಗಳಲ್ಲಿ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಿದ್ದರು.
ಅತ್ಯಾಚಾರ ಆರೋಪಿ ಪರ ವಕೀಲರು ವಾದ ಮಂಡಿಸಿದ್ದು, “ಯುವತಿಯು ಕುಜದೋಷ ಹೊಂದಿದ್ದಾರೆ. ಆದ್ದರಿಂದ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಲು ಸಾಧ್ಯವಿಲ್ಲ” ಎಂದಿದ್ದರು.
ಮತ್ತೊಂದೆಡೆ ಸಂತ್ರಸ್ತೆಯ ಪರ ವಕೀಲರಾದ ವಿವೇಕ್ ಕುಮಾರ್ ಸಿಂಗ್, “ಯುವತಿಯ ಜಾತಕದಲ್ಲಿ ಕುಜ ದೋಷ ಇಲ್ಲ. ಆಕೆ ‘ಮಾಂಗಲಿಕ’ ಅಲ್ಲ” ಎಂದು ವಾದಿಸಿದ್ದರು.
“ಲಕ್ನೋ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥರು ಹುಡುಗಿ ಮಂಗಳಿಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬಹುದು. ಸಂಬಂಧಪಟ್ಟವರು ಹತ್ತು ದಿನಗಳಲ್ಲಿ ಲಕ್ನೋ ವಿವಿಯ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥರ ಮುಂದೆ ಕುಂಡಲಿಯನ್ನು ಹಾಜರುಪಡಿಸಬೇಕು. ಮೂರು ವಾರಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಆದೇಶದಲ್ಲಿ ಸೂಚಿಸಲಾಗಿತ್ತು.