Advertisement

header ads

ಇತ್ತೀಚಿನ ವರ್ಷಗಳಲ್ಲಿ ಭಾರತ ಕಂಡ ಭೀಕರ ರೈಲು ದುರಂತಗಳಿವು

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಘಟಿಸಿದ ರೈಲು ದುರಂತದಲ್ಲಿ ಸಿಲುಕಿದವರನ್ನು ರಕ್ಷಿಸಲು ನಡೆಯುತ್ತಿರುವ ರಕ್ಷಣಾ ಕಾರ್ಯ (PC: AP)

ಒಡಿಶಾ ರಾಜ್ಯದಲ್ಲಿ ಮೂರು ರೈಲುಗಳು ಡಿಕ್ಕಿಯಾಗಿ ಸುಮಾರು 300 ಮಂದಿ ಕೊನೆಯುಸಿರೆಳೆದಿದ್ದಾರೆ. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ರೈಲು ಮತ್ತು ಒಂದು ಗೂಡ್ಸ್‌ ರೈಲು ಗಾಡಿ ನಡುವೆ ನಡೆದಿರುವ ಈ ದುರಂತದಲ್ಲಿ ಸುಮಾರು 900 ಮಂದಿ ಗಾಯಗೊಂಡಿದ್ದಾರೆಂದು ಅಂದಾಜಿಸಲಾಗಿದೆ. ಶುಕ್ರವಾರ ರಾತ್ರಿ ಘಟಿಸಿರುವ ಈ ಪ್ರಕರಣ ಸೇರಿದಂತೆ ಭಾರತ ಇತ್ತೀಚಿನ ವರ್ಷಗಳಲ್ಲಿ ಹಲವು ರೈಲು ದುರಂತಗಳನ್ನು ಕಂಡಿದೆ.


ಹಳಿತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳಿಗೆ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಡಿಕ್ಕಿ ಹೊಡೆದು ಎದುರಿನ ಹಳಿಯಲ್ಲಿ ಬಿದ್ದಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಭ್ ಶರ್ಮಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿ ಟ್ವೀಟ್ ಮಾಡಿದ್ದಾರೆ. “ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಿಂದ ನೋವಾಗಿದೆ. ಈ ದುಃಖದ ಘಳಿಗೆಯಲ್ಲಿ ನನ್ನ ಆಲೋಚನೆಗಳು ದುಃಖತಪ್ತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿದ್ದೇನೆ. ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿಯವರು ಒಡಿಸ್ಸಾಕ್ಕೆ ಭೇಟಿ ನೀಡುತ್ತಿದ್ದಾರೆ. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಹಾಯಕ್ಕೆ ಧಾವಿಸಿದ್ದಾರೆ

“ಇದು ಹೇಗೆ ಸಂಭವಿಸಿತು ಮತ್ತು ಏಕೆ ಸಂಭವಿಸಿತು ಎಂಬುದು ರೈಲ್ವೆ ಮಂಡಳಿಯು ಆದೇಶಿಸಿದ ವಿವರವಾದ ತನಿಖೆಯಲ್ಲಿ ಕಂಡುಬರುತ್ತದೆ. ಆದರೆ, ಮೇಲ್ನೋಟಕ್ಕೆ ಇದು ಮಾನವ ನಿರ್ಮಿತ ಅವಘಡ ಎಂದು ತೋರುತ್ತದೆ” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಅದೇ ಅಧಿಕಾರಿಯ ಹೇಳುವ ಪ್ರಕಾರ 1995ರಲ್ಲಿ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಇದೇ ರೀತಿಯ ಅವಘಡ ಸಂಭವಿಸಿತ್ತು. ಆ ಸಮಯದಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಸುಮಾರು 350 ಜನರು ಸಾವನ್ನಪ್ಪಿದ್ದರು. ರಕ್ಷಣಾ ಕಾರ್ಯಾಚರಣೆ ಮೂರು ದಿನಗಳ ಕಾಲ ನಡೆದಿತ್ತು.

300 ಮಂದಿಯ ಸಾವಿಗೆ ಕಾರಣವಾಗಿರುವ ಈಗಿನ ಘಟನೆಯು ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಘಟಿಸಿದ ಹಲವು ರೈಲು ದುರಂತಗಳನ್ನು ನೆನಪಿಸಿದೆ.

2011, ಜುಲೈ 7ರಂದು ಛಪ್ರಾ-ಮಥುರಾ ಎಕ್ಸ್‌ಪ್ರೆಸ್ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಬಳಿ ಬಸ್‌ಗೆ ಡಿಕ್ಕಿ ಹೊಡೆದಿತ್ತು. 69 ಮಂದಿ ಪ್ರಾಣ ಕಳೆದುಕೊಂಡಿದ್ದರು. ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಮಾನವ ರಹಿತ ಕ್ರಾಸಿಂಗ್‌ನಲ್ಲಿ ರಾತ್ರಿ 1:55ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ರೈಲು ಅತಿವೇಗದಲ್ಲಿ ಚಲಿಸುತ್ತಿತ್ತು. ರೈಲಿಗೆ ಸಿಲುಕಿದ ಬಸ್ ಸುಮಾರು ಅರ್ಧ ಕಿಲೋಮೀಟರ್ ದೂರದಷ್ಟು ಎಳೆಯಲ್ಪಷ್ಟಿತ್ತು.

ರೈಲು ಅಪಘಾತಗಳನ್ನು ಅವಲೋಕಿಸುವಾಗ 2012ನೇ ಇಸವಿಯನ್ನು ಭಾರತೀಯ ರೈಲ್ವೇ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ವರ್ಷ ಎಂದು ಗುರುತಿಸಲಾಗುತ್ತದೆ. ಆ ವರ್ಷ ಸುಮಾರು 14 ಅಪಘಾತಗಳು ನಡೆದಿದ್ದವು. ರೈಲುಗಳ ಹಳಿತಪ್ಪುವಿಕೆ, ಮುಖಾಮುಖಿ ಡಿಕ್ಕಿಯಂತಹ ವರದಿಗಳಾಗಿದ್ದವು.

2012, ಜುಲೈ 30ರಂದು ನೆಲ್ಲೂರು ಬಳಿ ‘ದೆಹಲಿ-ಚೆನ್ನೈ ತಮಿಳುನಾಡು ಎಕ್ಸ್‌ಪ್ರೆಸ್‌’ನ ಕೋಚ್‌ಗೆ ಬೆಂಕಿ ತಗುಲಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

2014 ಮೇ 26ರಂದು ಉತ್ತರ ಪ್ರದೇಶದ ಸಂತ ಕಬೀರ್ ನಗರ ಪ್ರದೇಶದಲ್ಲಿ ರೈಲು ದುರಂತ ಘಟಿಸಿತ್ತು. ಗೋರಖ್‌ಪುರ ಕಡೆಗೆ ಹೋಗುತ್ತಿದ್ದ ‘ಗೋರಖ್‌ಧಾಮ್ ಎಕ್ಸ್‌ಪ್ರೆಸ್’ ಖಲೀಲಾಬಾದ್ ನಿಲ್ದಾಣದ ಸಮೀಪದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 25 ಜನರು ಸಾವನ್ನಪ್ಪಿದ್ದರು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

2015 ಮಾರ್ಚ್ 20ರಂದು ಡೆಹ್ರಾಡೂನ್‌ನಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದ ಜನತಾ ಎಕ್ಸ್‌ಪ್ರೆಸ್‌ ಅಪಘಾತಕ್ಕೆ ತುತ್ತಾಗಿತ್ತು. ಉತ್ತರ ಪ್ರದೇಶದ ರಾಯ್ ಬರೇಲಿಯ ಬಚ್ರವಾನ್ ರೈಲು ನಿಲ್ದಾಣದ ಬಳಿ ರೈಲಿನ ಇಂಜಿನ್ ಮತ್ತು ಎರಡು ಪಕ್ಕದ ಕೋಚ್‌ಗಳು ಹಳಿತಪ್ಪಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಸುಮಾರು 150 ಜನರು ಗಾಯಗೊಂಡಿದ್ದರು.

2016 ನವೆಂಬರ್ 20ರಂದು ಇಂದೋರ್-ಪಾಟ್ನಾ ಎಕ್ಸ್‌ಪ್ರೆಸ್ ಅಪಘಾತಕ್ಕೆ ತುತ್ತಾಗಿತ್ತು. ಈ ರೈಲು ಕಾನ್ಪುರದ ಪುಖ್ರಾಯನ್ ಬಳಿ ಹಳಿತಪ್ಪಿ ಕನಿಷ್ಠ 150 ಪ್ರಯಾಣಿಕರು ಸಾವನ್ನಪ್ಪಿದ್ದರು. 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಹರಿದ್ವಾರ ಮತ್ತು ಪುರಿ ನಡುವೆ ಚಲಿಸುವ ಕಳಿಂಗ ಉತ್ಕಲ್ ಎಕ್ಸ್‌ಪ್ರೆಸ್ 2017ರ ಆಗಸ್ಟ್ 19ರಂದು ಉತ್ತರ ಪ್ರದೇಶದ ಮುಜಾಫರ್‌ನಗರದ ಖತೌಲಿ ಬಳಿ ಅಪಘಾತಕ್ಕೀಡಾಯಿತು. ರೈಲಿನ 14 ಬೋಗಿಗಳು ಹಳಿತಪ್ಪಿ 21 ಪ್ರಯಾಣಿಕರು ಮೃತಪಟ್ಟರೆ, 97 ಮಂದಿ ಗಾಯಗೊಂಡಿದ್ದರು.

ದೆಹಲಿಗೆ ಹೋಗುವ ಕೈಫಿಯತ್ ಎಕ್ಸ್‌ಪ್ರೆಸ್‌ನ ಒಂಬತ್ತು ರೈಲು ಬೋಗಿಗಳು 2017ರ ಆಗಸ್ಟ್ 23ರಂದು ಉತ್ತರ ಪ್ರದೇಶದ ಔರೈಯಾ ಬಳಿ ಹಳಿತಪ್ಪಿ ಕನಿಷ್ಠ 70 ಮಂದಿ ಗಾಯಗೊಂಡಿದ್ದರು.

ಜನವರಿ 13, 2022ರಂದು ಪಶ್ಚಿಮ ಬಂಗಾಳದ ಅಲಿಪುರ್ದೂರ್‌ನಲ್ಲಿ ಬಿಕಾನೇರ್-ಗುವಾಹಟಿ ಎಕ್ಸ್‌ಪ್ರೆಸ್‌ನ ಕನಿಷ್ಠ 12 ಬೋಗಿಗಳು ಹಳಿತಪ್ಪಿ 9 ಮಂದಿ ಸಾವನ್ನಪ್ಪಿದ್ದರು. 36 ಮಂದಿ ಗಾಯಗೊಂಡಿದ್ದರು.

Post a Comment

0 Comments