ಹಜ್ ಭವನಕ್ಕೆ 5000 ಕೋಟಿ ರೂ. ಬಿಡುಗಡೆ ವಿಚಾರ: ಸುಳ್ಳು ಸುದ್ದಿ ಹರಡದಂತೆ ಮಾಧ್ಯಮಗಳಿಗೆ ಕಾಂಗ್ರೆಸ್ ಕಿವಿಮಾತು

ಹಜ್ ಭವನ ನವೀಕರಣಕ್ಕೆ ಮುಖ್ಯಮಂತ್ರಿಗಳು 5 ಸಾವಿರ ಕೋಟಿ ರೂ. ನೀಡಿದ್ದಾರೆ ಎಂದು ಕನ್ನಡದ

ಪಬ್ಲಿಕ್ ಟಿವಿ ವಾಹಿನಿಯು ಸುದ್ದಿ ಪ್ರಸಾರ ಮಾಡಿತ್ತು. ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎನ್ನುವುದನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಮಹತ್ವದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾವಚಿತ್ರವಿದ್ದು, ಅದರಲ್ಲಿನ ಮಾಹಿತಿ ವಿಚಾರ ಕೂಡ ಗೊಂದಲಕಾರಿಯಾಗಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದು ಕೂಡ ನಕಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.

”ಗೃಹ ಲಕ್ಷ್ಮೀ ಯೋಜನೆಗೆ ಸಂಬಂಧಿಸಿ ಇಲಾಖೆಯಿಂದ ಅಧಿಕೃತವಾಗಿ ಅರ್ಜಿ ನಮೂನೆ ಬಿಡುಗಡೆಯಾಗಿಲ್ಲ. ಅದರ ಸಿದ್ಧತೆ ನಡೆಯುತ್ತಿದೆ, ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿರುವ ಅರ್ಜಿ ನಮೂನೆ ನಕಲಿ” ಎಂದು ಇಲಾಖೆಯ ನಿರ್ದೇಶನಾಲಯ ಕಚೇರಿಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ”ಮಾಧ್ಯಮಗಳು ಹೊಣೆಗಾರಿಕೆಯಿಂದ ವರ್ತಿಸಬೇಕು, ಪತ್ರಿಕಾಧರ್ಮಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಾಗ ಮಾತ್ರ ಸ್ವಸ್ಥ ಸಮಾಜ ರೂಪಿಸಲು ಸಾಧ್ಯ. ನಮ್ಮ ಸರ್ಕಾರದ ಬಗ್ಗೆ ರಚನಾತ್ಮಕ ಟೀಕೆ, ವಿಮರ್ಶೆ, ಸಲಹೆಗಳಿಗೆ ಸದಾ ಸ್ವಾಗತವಿರುತ್ತದೆ. ಆದರೆ ಉದ್ದೇಶಪೂರ್ವಕವಾಗಿ ನಕಾರಾತ್ಮಕ ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಬೇಡಿ ಎಂಬುದು ನಮ್ಮ ಕಳಕಳಿಯ ಮನವಿ” ಎಂದು ಹೇಳಿದೆ.


ಹಜ್ ಭವನಕ್ಕೆ 5000 ಕೋಟಿ ರೂ. ಕೊಟ್ಟ ಸರ್ಕಾರ: ಮಾಧ್ಯಮ ವರದಿಗೆ ಸಚಿವ ಝಮೀರ್ ಅಹ್ಮದ್ ಸ್ಪಷ್ಟಣೆ


”ಕರ್ನಾಟಕ ಹಜ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಹಜ್ ಭವನ ನಿರ್ಮಾಣಕ್ಕೆ ಐದು ಸಾವಿರ ಕೋಟಿ ರೂ. ಕೊಡುವಂತೆ ನಾನು ಬೇಡಿಕೆ ಇಟ್ಟಿದ್ದೇನೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಅದು ಶುದ್ಧ ಸುಳ್ಳು” ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಸ್ಪಷ್ಟ ಪಡಿಸಿದ್ದಾರೆ.


ಈ ಕುರಿತು ಹೇಳಿಕೆ ನೀಡಿರುವ ಅವರು, ”ವಾಸ್ತವವಾಗಿ ನಾನು ಅಂದು ಮನವಿ ಮಾಡಿದ್ದು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ 5000 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಲಾಗಿದೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಿನ್ನೆಲೆಯಲ್ಲಿ ನಮಗೆ ನೀಡುವುದಾಗಿ ಹೇಳಿರುವ ಅನುದಾನ ಕಡಿತ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ನಮ್ಮ ಧರ್ಮ ಗುರುಗಳು ಆತಂಕಗೊಂಡಿದ್ದಾರೆ. ದಯವಿಟ್ಟು ತಾವು ಯಾವುದೇ ರೀತಿಯ ಕಡಿತ ಮಾಡಬಾರದು. ಹಿಂದೆ ನೀವು ಮುಖ್ಯಮಂತ್ರಿ ಆಗಿದ್ದಾಗ 2018ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 3150 ಕೋಟಿ ರೂ. ಕೊಟ್ಟಿದ್ದೀರಿ. ಆ ನಂತರ ಬಂದ ಸರ್ಕಾರಗಳು ಕ್ರಮೇಣ ಅನುದಾನ ಕಡಿಮೆ ಮಾಡುತ್ತಾ ಹೋಗಿವೆ. ಹೀಗಾಗಿ ಐದು ಸಾವಿರ ಕೋಟಿ ರೂ. ಅನುದಾನ ನೀಡಿದರೆ ನಮ್ಮ ಸಮುದಾಯಕ್ಕೆ ಬಹಳ ದೊಡ್ಡ ಉಪಕಾರ ಆಗುತ್ತದೆ ಎಂದು ನಾನು ಮನವಿ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ.

”ಹಜ್ ಭವನದ ನವೀಕರಣಕ್ಕೆ ಐದು ಕೋಟಿ ರೂ. ಕೊಟ್ಟಿದ್ದೀರಿ ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದೇನೆ. ಆದರೆ ಕೆಲವರು ನನ್ನ ಹೇಳಿಕೆ ತಪ್ಪಾಗಿ ತಿರುಚಿ ಟ್ರೋಲ್ ಮಾಡುತ್ತಿದ್ದಾರೆ. ಅದು ಸತ್ಯಕ್ಕೆ ದೂರ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

5 ಕೋಟಿ ಎಂದಿದ್ದನ್ನು 5000 ಕೋಟಿ ಮಾಡಿದ ಪಬ್ಲಿಕ್ ಟಿವಿ


”ಹಜ್ ಭವನದ ನವೀಕರಣಕ್ಕೆ ಐದು ಕೋಟಿ ರೂ. ಕೊಟ್ಟಿದ್ದಕ್ಕೆ ಸಚಿವ ಝಮೀರ್ ಅಹ್ಮದ್ ಅವರು ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದರು. ಇದನ್ನೇ ಪಬ್ಲಿಕ್ ಟಿವಿ ಸುದ್ದಿವಾಹಿನಿಯು ”ಹಜ್ ಭವನ ನವೀಕರಣಕ್ಕೆ 5000 ಕೋಟಿದ್ದಾರೆ” ಎಂದು ಝಮೀರ್ ಅಹ್ಮದ್ ಅವರು ಹೇಳಿರುವುದಾಗಿ ವರದಿ ಮಾಡಿದೆ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಇದೀಗ ಖುದ್ದು ಝಮೀರ್ ಅಹ್ಮದ್ ಅವರೇ ಸ್ಪಷ್ಟನೆ ನೀಡಿದ್ದಾರೆ.
Previous Post Next Post

Ads

Ads

نموذج الاتصال

×