ಇಂದಿನಿಂದ ರಾಜ್ಯಾದಂತ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ: ಸಿಎಂ ಸಿದ್ದರಾಮಯ್ಯರಿಂದ ಶಕ್ತಿ ಯೋಜನೆಗೆ ಚಾಲನೆ

 ಸರ್ಕಾರ ಘೋಷಿಸಿದ್ದ ಐದು ‘ಗ್ಯಾರಂಟಿ’ಗಳ ಪೈಕಿ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ ಯೋಜನೆ ಶಕ್ತಿಗೆ ರಾಜ್ಯದಾದ್ಯಂತ ಸರ್ಕಾರ ಭಾನುವಾರ (ಜೂನ್ 11) ಚಾಲನೆ ನೀಡಲಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಮಾಹಿತಿ ನಬೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ”ಇಂದು ನಾವು ನೀಡಿದ ಗ್ಯಾರಂಟಿಗಳಲ್ಲಿ ಒಂದಾದ “ಶಕ್ತಿ” ಯೋಜನೆ ಜಾರಿಯಾಗುತ್ತಿದೆ. ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಮೂರು ತಿಂಗಳು ಕಾಲಾವಕಾಶ ಇರಲಿದೆ, ಸ್ಮಾರ್ಟ್ ಕಾರ್ಡ್ ಪಡೆಯುವವರೆಗೂ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ತೋರಿಸಿ ಪ್ರಯಾಣಿಸಬಹುದು” ಎಂದು ಹೇಳಿದೆ.

ಇಂದು (ಭಾನುವಾರ) ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ ಯೋಜನೆ ಶಕ್ತಿಯನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಳೀಯ ಶಾಸಕರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 1.00 ಗಂಟೆಯ ನಂತರ ಎಲ್ಲ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗಲಿದೆ. ”ಬಡ ಮತ್ತು ಕೆಳ ಮಧ್ಯಮವರ್ಗದ ದುಡಿಯುವ ಮಹಿಳೆಯರ ದಿನದ ಖರ್ಚಿನ ಹೊರೆಯನ್ನು ಇಳಿಸಿ, ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ಹೊಸ ಭಾಷ್ಯ ಬರೆಯಲಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಕ್ತಿ ಯೋಜನೆ ಅನುಷ್ಠಾನ ನಿಮಿತ್ತ ವಿಧಾನಸೌಧ ಮುಂಭಾಗ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಧಾನ ಸೌಧದ ಪೂರ್ವದಲ್ಲಿರುವ ದ್ವಾರದಲ್ಲಿರುವ ಮೆಟ್ಟಿಲುಗಳ ಮೇಲೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ ವೇದಿಕೆ ಎದುರು 2500 ಆಸನದ ವ್ಯವಸ್ಥೆ ಇದೆ. ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ವಾಯುವ್ಯ ಕರ್ನಾಟಕ ಸಾರಿಗೆ, ಬಿಬಿಎಂಟಿಸಿಯ ಬಸ್‌ಗಳು ಬಂದು ಅಲ್ಲಿ ನಿಂತಿವೆ.

ಇನ್ನು ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್‌ಗೆ ವಾಯುವ್ಯ ಕರ್ನಾಟಕ ಸಾರಿಗೆಯ ಬೈಲಹೊಂಗಲ ಘಟಕದ ಬೆಳಗಾವಿ ಬಸ್, ಕಲ್ಯಾಣ ಕರ್ನಾಟಕ ಸಾರಿಗೆಯ ರಾಯಚೂರು ಬಸ್‌, ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ಮೈಸೂರು, ಧರ್ಮಸ್ಥಳ ಬಸ್‌ಗಳು ಸೇರಿ ಒಟ್ಟು 5 ಬಸ್‌ಗಳು ಒಂದು ನಿಂತಿದ್ದು ಇವೆಲ್ಲಕ್ಕೂ ಸಿಎಂ ಹಸಿರು ನಿಶಾನೆ ತೋರಿಸಲಿದ್ದಾರೆ ಬಸ್‌ಗಳಿಗೆಲ್ಲ ಹಾರಹಾಕಿ ಸುಂದರವಾಗಿ ಅಲಂಕರಿಸಲಾಗಿದೆ.

ಇನ್ನು ಮಹಿಳೆಯರ ಉಚಿತ ಬಸ್‌ ಸಂಚಾರದ ಯೋಜನೆ ಶಕ್ತಿಯನ್ನು ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲವು ಮಹಿಳೆಯರಿಗೆ ಸಾಂಕೇತಿಕವಾಗಿ ಉಚಿತ ಟಿಕೆಟ್ ನೀಡಲಿದ್ದಾರೆ. ಹೀಗೆ ಮುಖ್ಯಮಂತ್ರಿಯಿಂದ ಉಚಿತ ಟಿಕೆಟ್ ಪಡೆಯುವ ಮೊದಲ ಮಹಿಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಎಂದು ಹೇಳಲಾಗಿದೆ ಇವರಿಗೆ ಮಜೆಸ್ಟಿಕ್‌ ಬಸ್ ನಿಲ್ದಾಣದಲ್ಲಿ ಸಿದ್ದರಾಮಯ್ಯನವರು ಉಚಿತ ಬಿಎಂಟಿಸಿ ಬಸ್ ಟಿಕೆಟ್ ಕೊಡಲಿದ್ದಾರೆ. ಈ ಮೂಲಕ ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಉಚಿತ ಬಸ್‌ ಪ್ರಯಾಣಕ್ಕೆ ಮೊದಲ ಟಿಕೆಟ್ ಪಡೆದ ಮೊದಲ ಮಹಿಳೆಯಾಗಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ”ಮುಖ್ಯಮಂತ್ರಿಯವರು ಯೋಜನೆಗೆ ಚಾಲನೆ ನೀಡಿದ ಬಳಿಕ ಬಸ್‌ನಲ್ಲಿ ನಾವೂ ಒಂದು ಸುತ್ತು ಹೋಗುತ್ತೇವೆ. ಕೆಲವರಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್ ಕೊಡುತ್ತೇವೆ. ಮೂರು ತಿಂಗಳ ಒಳಗೆ ಎಲ್ಲರೂ ಸ್ಮಾರ್ಟ್ ಮಾಡಿಸಿಕೊಳ್ಳಬೇಕು” ಎಂದು ತಿಳಿಸಿದರು.

”ಯಾವ ಬಸ್‌ಗಳಲ್ಲಿ ಉಚಿತ ಪ್ರಯಾಣ ಅವಕಾಶ ಸಿಗಲಿದೆ ಎಂದು ಈಗಾಗಲೇ ಜಾಹೀರಾತುಗಳ ಮೂಲಕ ಮಾಹಿತಿ ನೀಡಿದ್ದೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ” ಎಂದೂ ಅವರು ಹೇಳಿದರು.

Previous Post Next Post

Ads

Ads

نموذج الاتصال

×