ಫ್ಯಾಕ್ಟ್‌ಚೆಕ್ : ಹಜ್ ಭವನ ನವೀಕರಣಕ್ಕೆ 5ಸಾವಿರ ಕೋಟಿ ರೂಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ


ಕರ್ನಾಟಕದ ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಿದಂತೆ ಮುಸ್ಲಿಮರನ್ನು ಓಲೈಕೆ ಮಾಡಲು ಪ್ರಾರಂಭಿಸಿದೆ. ಹಜ್ ಭವನ ನಿರ್ಮಾಣಕ್ಕೆ 5 ಸಾವಿರ ಕೋಟಿ ನೀಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಮೋದಿ ಹೊಸ ಸಂಸತ್ತು ಭವನಕ್ಕೆ ಖರ್ಚು ಮಾಡಿದ್ದು 885 ಕೋಟಿ. ಭಕ್ತರೇ ಹಣ ಕೊಟ್ಟು ನಿರ್ಮಾಣ ಮಾಡ್ತಾ ಇರೋ ರಾಮ ಮಂದಿರಕ್ಕೆ ಆಗೋ ಅಂದಾಜು ಖರ್ಚು 3000 ಕೋಟಿ. ಸರ್ದಾರ್ ಪಟೇಲ್ ಸ್ಮಾರಕ ಕಟ್ಟಿಸಲು ಆದ ಖರ್ಚು 2900 ಕೋಟಿ.

ಸಿದ್ದರಾಮಯ್ಯ ಹಜ್ ಭವನದ ಬರೀ ನವಿಕರಣಕ್ಕೆ 5 ಸಾವಿರ ಕೋಟಿ ಕೊಡ್ತಾರೆ ಮಾರ್ರೆ. ರಾಮ ಮಂದಿರ ಕಟ್ಟೋಕೆ ಹೊರಟಾಗ ಇದಕ್ಕಿಂತ ಆಸ್ಪತ್ರೆ ಕಟ್ಟಿಸಬಹುದು, ಶಾಲೆ ಕಾಲೇಜು ಕಟ್ಟಿಸಬಹುದು, ಬಡವರಿಗೆ ಮನೆ ಕಟ್ಟಿಸಬಹುದು ಅಂತ ಬಿಟ್ಟಿ ಸಲಹೆ ಕೊಟ್ಟವರು ಈಗ ಯಾರು ಜೀವಂತ ಇಲ್ವೇ? ಆಸ್ಪತ್ರೆ, ಮನೆ, ಶಾಲೆ ಕಾಲೇಜು ಈಗ ನಿರ್ಮಾಣ ಮಾಡೋದು ಬೇಡ್ವಾ?

‘ಹಜ್‌ ಭವನ ನವೀಕರಣಕ್ಕೆ ಸಿಎಂ 5 ಸಾವಿರ ಕೋಟಿ ಅನುದಾನ ನೀಡಿದ್ದಾರೆ’ ಎಂಬ ಹೇಳಿಕೆಯನ್ನು ಕನ್ನಡದ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದೆ. ಆ ಪ್ರಸಾರದ ಸ್ಕ್ರೀನ್‌ಶಾಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿವೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜಡ್‌. ಜಮೀರ್‌ ಅಹಮದ್‌ ಖಾನ್‌ ಅವರು ಇದು ಸುಳ್ಳು ಎಂದು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ವಾಸ್ತವವಾಗಿ ನಾನು ಅಂದು ಮನವಿ ಮಾಡಿದ್ದು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ 5000 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಲಾಗಿದೆ.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಿನ್ನೆಲೆಯಲ್ಲಿ ನಮಗೆ ನೀಡುವುದಾಗಿ ಹೇಳಿರುವ ಅನುದಾನ ಕಡಿತ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ನಮ್ಮ ಧರ್ಮ ಗುರುಗಳು ಆತಂಕ ಗೊಂಡಿದ್ದಾರೆ. ದಯವಿಟ್ಟು ತಾವು ಯಾವುದೇ ರೀತಿಯ ಕಡಿತ ಮಾಡಬಾರದು. ಹಿಂದೆ ನೀವು ಮುಖ್ಯಮಂತ್ರಿ ಆಗಿದ್ದಾಗ 2018 ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 3150 ಕೋಟಿ ರೂ. ಕೊಟ್ಟಿದ್ದೀರಿ. ಆ ನಂತರ ಬಂದ ಸರ್ಕಾರಗಳು ಕ್ರಮೇಣ ಅನುದಾನ ಕಡಿಮೆ ಮಾಡುತ್ತಾ ಹೋಗಿವೆ. ಹೀಗಾಗಿ ಐದು ಸಾವಿರ ಕೋಟಿ ರೂ. ಅನುದಾನ ನೀಡಿದರೆ ನಮ್ಮ ಸಮುದಾಯಕ್ಕೆ ಬಹಳ ದೊಡ್ಡ ಉಪಕಾರ ಆಗುತ್ತದೆ ಎಂದು ನಾನು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಜತೆಗೆ ಹಜ್ ಭವನದ ನವೀಕರಣಕ್ಕೆ ಐದು ಕೋಟಿ ರೂ. ಕೊಟ್ಟಿದ್ದೀರಿ ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದೇನೆ. ಆದರೆ ಕೆಲವರು ನನ್ನ ಹೇಳಿಕೆ ತಪ್ಪಾಗಿ ತಿರುಚಿ ಟ್ರೊಲ್ ಮಾಡುತ್ತಿದ್ದಾರೆ. ಅದು ಸತ್ಯಕ್ಕೆ ದೂರ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


ಒಟ್ಟಾರೆಯಾಗಿ ಹೇಳುವುದಾದರೆ, ಹಜ್ ಭವನದ ನವೀಕರಣಕ್ಕೆ ಐದು ಕೋಟಿ ರೂ. ಕೊಟ್ಟಿದ್ದಕ್ಕೆ ಸಚಿವ ಜಮೀರ್‌ ಅಹಮದ್‌ ಅವರು ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದರು. ಇದನ್ನೇ ಪಬ್ಲಿಕ್ ಟಿವಿ ಸುದ್ದಿವಾಹಿನಿಯು ”ಹಜ್ ಭವನ ನವೀಕರಣಕ್ಕೆ 5000 ಕೋಟಿದ್ದಾರೆ” ಎಂದು ಜಮೀರ್ ಅಹ್ಮದ್ ಅವರು ಹೇಳಿರುವುದಾಗಿ ತಪ್ಪಾಗಿ ವರದಿ ಮಾಡಿದೆ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಇದೀಗ ಸ್ವತಃ ಜಮೀರ್ ಅಹ್ಮದ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು ನಮ್ಮ ವಾಟ್ಸಾಪ್ ನಂ 918296846895 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

3 Comments

Previous Post Next Post

Ads

Ads

نموذج الاتصال

×