ಚುನಾವಣೆ ಸಂದರ್ಭದಲ್ಲಿ ‘ಎದ್ದೇಳು ಕರ್ನಾಟಕ’ ಅಭಿಯಾನ ಮಾಡಿರುವ ಕೆಲಸಗಳಿಗೆ ಸಿಎಂ ಸಂತಸ ವ್ಯಕ್ತಪಡಿಸಿದರು

 ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ‘ಎದ್ದೇಳು ಕರ್ನಾಟಕ’ ನಿಯೋಗ; ಮನವಿ ಸಲ್ಲಿಕೆ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಾಗರಿಕರ ಜಾಗೃತಿಗಾಗಿ ರೂಪುತಾಳಿ ಪರಿಣಾಮಕಾರಿ ಅಭಿಯಾನ ನಡೆಸಿದ ‘ಎದ್ದೇಳು ಕರ್ನಾಟಕ’ ತಂಡವು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಚರ್ಚೆ ನಡೆಸಿತು.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಾಗರಿಕರ ಜಾಗೃತಿಗಾಗಿ ರೂಪುತಾಳಿ ಪರಿಣಾಮಕಾರಿ ಅಭಿಯಾನ ನಡೆಸಿದ ‘ಎದ್ದೇಳು ಕರ್ನಾಟಕ’ ತಂಡವು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಚರ್ಚೆ ನಡೆಸಿತು.

ಎದ್ದೇಳು ಕರ್ನಾಟಕದ ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳು ಮತ್ತು ವಿವಿಧ ಸಮುದಾಯಗಳ ಸಂಘಟನೆಗಳ ಮುಂದಾಳುಗಳ ನಿಯೋಗವು ಜೂನ್ 8ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಹಲವು ಸಂಗತಿಗಳನ್ನು ಚರ್ಚಿಸಿತು. ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆಯವರು ತಂಡದ ಸದಸ್ಯರನ್ನು ಮುಖ್ಯಮಂತ್ರಿಯವರಿಗೆ ಪರಿಚಯಿಸಿದರು.

ಕೋಮುವಾದಿ‌ ಬಿಜೆಪಿಯ ವಿರುದ್ಧ ಎದ್ದೇಳು ಕರ್ನಾಟಕವನ್ನೂ ಒಳಗೊಂಡಂತೆ ಶ್ರಮಿಸಿದ ಜನಪರ ಚಳವಳಿಗಳು, ಕೆಲವು ಜನಪರ ಮಾಧ್ಯಮಗಳು ಮತ್ತು ಪ್ರಜ್ಞಾವಂತರ ಪಾತ್ರದ ಬಗ್ಗೆ ಹೋರಾಟಗಾರ ಕೆ. ಎಲ್. ಅಶೋಕ್ ಪೀಠಿಕೆಯ ಮಾತುಗಳನ್ನಾಡಿದರು. ಶೋಷಿತರು, ದಲಿತ ದಮನಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರೇ ಮುಂತಾದ ಎಲ್ಲರ ಎದೆಯ ಮೇಲಿದ್ದ ಭಾರವನ್ನು ಇಳಿಸಿದಂತೆ ಅಸ್ತಿತ್ವಕ್ಕೆ ಬಂದಿರುವ ಈ ಸರ್ಕಾರದ ನೇತೃತ್ವ ವಹಿಸಿರುವ‌ ಮುಖ್ಯಮಂತ್ರಿಯವರನ್ನು ಎದ್ದೇಳು ಕರ್ನಾಟಕದ ಕಾರ್ಯಕಾರಿ ಮಂಡಳಿ ಪರವಾಗಿ ಅಭಿನಂದಿಸಿದರು.

“ಸರ್ಕಾರವು 5 ಗ್ಯಾರಂಟಿಗಳನ್ನು ಈಡೇರಿಸುವುದರ ಜೊತೆಗೆ, ಬಿಜೆಪಿಯ ದುರಾಡಳಿತದಿಂದಾಗಿ ಜಾರಿಗೆ ಬಂದಂತಹ ತಪ್ಪುಗಳನ್ನು ಸರಿಪಡಿಸಬೇಕಾದ ಗುರುತರ ಹೊಣೆಯನ್ನೂ ನಿರ್ವಹಿಸಬೇಕಿದೆ” ಎಂದು ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್‌ ಹೇಳಿದರು. ಜೊತೆಗೆ ಹಲವಾರು ಅಂಶಗಳನ್ನು ಸಿದ್ದರಾಮಯ್ಯನವರ ಮುಂದಿಟ್ಟರು.

“ಭೂಮಿ ಮತ್ತು ವಸತಿ ವಂಚಿತರಿಗೆ ಆಗಿರುವ ಅನ್ಯಾಯ ಸರಿಪಡಿಸುವುದು, ರೈತವಿರೋಧಿ ಕೃಷಿಕಾಯ್ದೆಗಳನ್ನು ಹಿಂಪಡೆಯುವುದು ಮತ್ತು ನ್ಯಾಯಬದ್ಧ ಬೆಲೆ ಖಾತ್ರಿಯ ಪ್ರಕ್ರಿಯೆ ಪ್ರಾರಂಭಿಸುವುದು, ಪಠ್ಯಕ್ರಮ- ಶಿಕ್ಷಣದ ಕೇಸರೀಕರಣ, ಸರ್ಕಾರಿ ಶಾಲೆಗಳ ದುರಾವಸ್ಥೆ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿ ಮಾಡಲಾದ ತಪ್ಪು ನಿರ್ಧಾರಗಳನ್ನು ಸರಿಪಡಿಸುವುದು, ಮೀಸಲಾತಿ ಗೋಜಲನ್ನು ಸರಿಪಡಿಸಲು ಸಮಗ್ರ ಯೋಜನೆ ರೂಪಿಸುವುದು, ಸಮುದಾಯಗಳನ್ನು ಒಡೆಯದಂತೆ ಎಚ್ಚರಿಕೆ ವಹಿಸುತ್ತಲೇ ಒಳಮೀಸಲಾತಿ ವಿವಾದಕ್ಕೆ ಪರಿಹಾರ ಒದಗಿಸುವುದು, ಕನ್ನಡದ‌ ಜನಮಾನಸದಲ್ಲಿ ಆರೆಸ್ಸೆಸ್‌ ಬಿತ್ತಿರುವ ವಿಷವನ್ನು ಇಲ್ಲವಾಗಿಸುವಂತಹ ಸಹಬಾಳ್ವೆ ಪರವಾದ ಹೆಜ್ಜೆಗಳನ್ನು ಸರ್ಕಾರವೇ ಮುಂದಾಳತ್ವ ತೆಗೆದುಕೊಂಡು ಮುಂದಿಡುವುದು, ಹಾಗೆಯೇ ಯುವಜನರಿಗೆ ಉದ್ಯೋಗ ಸೃಷ್ಟಿ- ಉದ್ಯೋಗ ಭದ್ರತೆಯ ವಿಷಯದಲ್ಲಿ ಪರಿಣತರೊಂದಿಗೆ ಚರ್ಚಿಸಿ ದಿಟ್ಟ ಕ್ರಮಗಳಿಗೆ ಮುಂದಾಗುವುದು, 12 ಗಂಟೆ ಕೆಲಸದ ಅವಧಿಯ ಕಾಯ್ದೆಯನ್ನು ರದ್ದುಗೊಳಿಸುವುದು”- ಈ ಅಂಶಗಳನ್ನು ಸಿಎಂ ಅವರಲ್ಲಿ ಪ್ರಸ್ತಾಪಿಸಿದರು.

ಈ ವಿಷಯಗಳು ಬೊಕ್ಕಸಕ್ಕೆ ಹೆಚ್ಚುವರಿ ಹೊರೆಮಾಡದಂತೆ ಜನಸಮುದಾಯಗಳ ಮತ್ತು ಚಳವಳಿಗಳ ಸಹಭಾಗಿತ್ವದಲ್ಲಿ ನಡೆಯುವಂಥವಾದ್ದರಿಂದ ಕೂಡಲೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾದ್ದರಿಂದ, ಈ ಬಗ್ಗೆ ಚಿಂತಿಸಬೇಕೆಂದು ಮನವಿ ಮಾಡಲಾಯಿತು.

ಪರಿಸರ ಹೋರಾಟಗಾರ್ತಿ ಹಾಗೂ ಎದ್ದೇಳು ಕರ್ನಾಟಕದ ಚಾಲನಾ ಸದಸ್ಯರಲ್ಲೊಬ್ಬರಾದ ತಾರಾ‌ರಾವ್ ಅವರು ಮಾತನಾಡಿ, “ಆಡಳಿತದಲ್ಲಿ ಉತ್ತರದಾಯಿತ್ವ ಹಾಗೂ ಜನಪರತೆಗಾಗಿ ಸಮುದಾಯಗಳು, ತಜ್ಞರೊಂದಿಗೆ ತಳಮಟ್ಟದ ತನಕ ನಿರಂತರ ಸಮನ್ವಯ ಇರುವಂತೆ ಸರ್ಕಾರ ನೋಡಿಕೊಳ್ಳುವ ಮೂಲಕ, ಬಿಜೆಪಿಯ ವಿರುದ್ಧ ಇಡೀ ಭಾರತಕ್ಕೆ ಕರ್ನಾಟಕ ಹೊಸದೊಂದು ಮಾದರಿ ಆಡಳಿತ ನೀಡಬಹುದು” ಎಂದು ವಿವರಿಸಿದರು.

ಮುಸ್ಲಿಂ ಸಮುದಾಯದ ನಾಯಕರಾದ ಮಹಮ್ಮದ್ ಯೂಸುಫ್ ಕನ್ನಿಯವರು 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಎದ್ದೇಳು ಕರ್ನಾಟಕ ರೂಪಿಸಿಕೊಂಡಿರುವ ಯೋಜನೆಯನ್ನು ಮುಂದಿಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿ.ಬಿ.ಪಾಟೀಲರ್‌ ಮಾತನಾಡಿ, “ವಾಟ್ಸಾಪ್ ಮೂಲಕ ವಿಷಬೀಜ ಬಿತ್ತುತ್ತಿರುವ ಸಂಘಪರಿವಾರದ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಸಲುವಾಗಿ ನಿರ್ದಿಷ್ಟ ಯೋಜನೆ ರೂಪಿಸಬೇಕು” ಎಂದು ತಿಳಿಸಿದರು.

ಮುಖ್ಯಮಂತ್ರಿಗಳನ್ನು ಭೇಟಿಮಾಡಿದ ತಂಡದ ನೇತೃತ್ವವನ್ನು ಚಾಲನಾ ಸಮಿತಿಯ ಸದಸ್ಯರಲ್ಲೊಬ್ಬರೂ ಹಿರಿಯರೂ ಆದ ವಿಜಯಮ್ಮ ವಹಿಸಿದ್ದರು. ನಿಯೋಗದ ಭಾಗವಾಗಿ ದಲಿತ ಚಳುವಳಿಯ ಹಿರಿಯ ನಾಯಕರಾದ‌ ಎನ್. ವೆಂಕಟೇಶ್, ರೈತಮುಖಂಡರಾದ ವೀರಸಂಗಯ್ಯ, ಕ್ರೈಸ್ತ ಸಮುದಾಯದ ಪ್ರತಿನಿಧಿಯಾಗಿ ಫಾ. ಅರುಣ್ ಲೂಯಿಸ್, ಹಿಂದುಳಿದ ವರ್ಗಗಳ ಸಂಘಟನೆಗಳ ನಾಯಕರಾದ ರಾಮಚಂದ್ರಪ್ಪ, ಎಣ್ಣೆಗೆರೆ ವೆಂಕಟರಾಮಯ್ಯ, ಸ್ವರಾಜ್ ಅಭಿಯಾನದ ವಿಜಯ್ ಕುಮಾರ್ ಸೀತಪ್ಪ, ಜಮಾತ್ ಎ ಇಸ್ಲಾಮಿ ಹಿಂದ್‌ನ ನಾಯಕರಾದ ಅಕ್ಬರ್ ಅಲಿ ಉಡುಪಿ, ಮೌಲಾನಾ ಹಾಮಿದ್ ಉಮರಿ, ವಿಚಾರವಾದಿ ಸಂಘದ ಅರಳುಕುಪ್ಪೆ ನಾಗೇಶ್, ಎದ್ದೇಳು ಕರ್ನಾಟಕದ ವರದರಾಜ ನಿಯೋಗದಲ್ಲಿದ್ದರು.

ಮುಖ್ಯಮಂತ್ರಿಗಳಿಗೆ ಜನತೆಯ ನಿರೀಕ್ಷೆಗಳ ಪತ್ರ ಸಲ್ಲಿಸಲಾಯಿತು. ಎದ್ದೇಳು ಕರ್ನಾಟಕದ ನಿಯೋಗಕ್ಕೆ ಮುಕ್ತ ಕಂಠದಿಂದ ಧನ್ಯವಾದ ಹೇಳಿದ ಮುಖ್ಯಮಂತ್ರಿಗಳು “ಕೋಮುವಾದಿಗಳನ್ನು ಸೋಲಿಸುವ ಗುರಿಯೊಂದಿಗೆ ನೀವೆಲ್ಲಾ ನಿಸ್ವಾರ್ಥವಾಗಿ ಕೆಲಸ ಮಾಡಿದ್ದರಿಂದಲೇ ನಮ್ಮ ಪಕ್ಷ 136 ಸೀಟುಗಳನ್ನು ಪಡೆಯಲು ಸಾಧ್ಯವಾಯಿತು. ನಾವು ಕೆಲವು ತಪ್ಪುಗಳನ್ನು ಮಾಡಿರದಿದ್ದರೆ 150 ಸೀಟುಗಳನ್ನು ಪಡೆಯಬಹುದಿತ್ತು. ನೀವು ಮುಂದಿಟ್ಟಿರುವ ಸಲಹೆಗಳು ಸರಿಯಾಗಿವೆ. ಎಷ್ಟೇ ಕಷ್ಟವಾದರೂ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. 5 ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತರುತ್ತೇವೆ. ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡಿಯುತ್ತೇವೆ. ಭೂಮಿ ವಸತಿ, ಶಿಕ್ಷಣ ಮುಂತಾದ ನಿಮ್ಮ ಸಲಹೆಗಳನ್ನೆಲ್ಲಾ ಕೂಲಂಕಷವಾಗಿ ಗಮನಿಸಿ ಕಾರ್ಯಪ್ರವೃತ್ತರಾಗುತ್ತೇವೆ. ನೀವೆಲ್ಲರೂ ನಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗಳಿಗೆ ನಿರಾಸೆಯಾಗದಂತೆ ನಡೆದುಕೊಳ್ಳುತ್ತೇವೆ” ಎಂದು ಭರವಸೆಕೊಟ್ಟರು. ನಿರ್ದಿಷ್ಟವಾದ ಕೆಲವು ಸಂಗತಿಗಳನ್ನು ಚರ್ಚಿಸಲು ಮತ್ತೆ ಸಭೆ ಗೊತ್ತುಪಡಿಸುವುದಾಗಿ ತಿಳಿಸಿದರು. ಒಟ್ಟಿನಲ್ಲಿ ಇದು ಬಹಳ ಫಲಪ್ರದ ಮತ್ತು ಅರ್ಥಪೂರ್ಣ ಸಭೆಯಾಗಿತ್ತು.

Previous Post Next Post

Ads

Ads

نموذج الاتصال

×