e-AASTHI: ಇನ್ಮುಂದೆ ಇ-ಸ್ವತ್ತು, ಖಾತೆ ಬದಲಾವಣೆಗೆ ಕೈಬರಹದ ಅರ್ಜಿ ಬಂದ್; ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ | ಸೆಪ್ಟೆಂಬರ್ 1ರಿಂದ ಅರ್ಜಿ ಸಲ್ಲಿಕೆ ಆರಂಭ

ಪೌರಾಡಳಿತ ಇಲಾಖೆಯು e-AASTHI ಹೊಸ ತಂತ್ರಾಂಶ ಅನುಷ್ಠಾನಗೊಳಿಸಿದ್ದು; ಇನ್ಮುಂದೆ ಆಸ್ತಿ ಮಾಲೀಕರು ಆಸ್ತಿಗೆ ಸಂಬ೦ಧಿಸಿದ ಸೇವೆಗಳಿಗೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಏಳೇ ದಿನಗಳಲ್ಲಿ ಪಡೆಯಬಹುದು…



e-AASTHI: ಇನ್ಮುಂದೆ ಇ-ಸ್ವತ್ತು, ಖಾತೆ ಬದಲಾವಣೆ ಕೋರಿ ಕೈಬರಹದ ಅರ್ಜಿ ಸಲ್ಲಿಸುವಂತಿಲ್ಲ, ಅಧಿಕಾರಿಗಳು ಸ್ವೀಕರಿಸುವಂತೆಯೂ ಇಲ್ಲ. ಹೌದು, ಇನ್ಮುಂದೆ ಆಸ್ತಿಗೆ ಸಂಬ೦ಧಿಸಿದ ಎಲ್ಲವೂ ಆನ್‌ಲೈನ್ ಆಗಲಿವೆ. ಇದಕ್ಕಾಗಿ ಸಾರ್ವಜನಿಕರು ನಗರಸಭೆ ಕಚೇರಿಗಳಿಗೆ ಎಡತಾಕಬೇಕಿಲ್ಲ. ತಿಂಗಳಾನುಗಟ್ಟಲೇ ಪರದಾಡಬೇಕಾಗಿಯೂ ಇಲ್ಲ!


ಯಾವುದಕ್ಕೆಲ್ಲ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು?


ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂದರೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಖಾತೆ ಬದಲಾವಣೆ, ಇ-ಸ್ವತ್ತು, ಹೊಸ ಆಸ್ತಿ ಗುರುತಿನ ಸಂಖ್ಯೆ, ಹಕ್ಕು ವರ್ಗಾವಣೆ, ಹಕ್ಕು ವಿಭಜನೆ ಸೇರಿದಂತೆ ಆಸ್ತಿಗೆ ಸಂಬ೦ಧಿಸಿದ ವಿವಿಧ ಸೇವೆಗಳಿಗೆ ಆಸ್ತಿ ಮಾಲೀಕರು ಇನ್ನು ಆನ್‌ಲೈನಲ್ಲೇ ಅರ್ಜಿ ಸಲ್ಲಿಸಬಹುದು.


ರಾಜ್ಯ ಪೌರಾಡಳಿತ ಇಲಾಖೆಯು ಇ-ಆಸ್ತಿ (e-AASTHI) ತಂತ್ರಾಂಶದ ಮೂಲಕ ಈ ಸೇವೆ ಒದಗಿಸಲಿದ್ದು, ಇದೇ ಆಗಸ್ಟ್ 15ರಿಂದ ಸೇವೆ ಅನುಷ್ಠಾನಗೊಂಡಿದ್ದು; ಸೆಪ್ಟೆಂಬರ್ 1ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಇದಕ್ಕಾಗಿ ನಗರಸಭೆ ವ್ಯಾಪ್ತಿಯ ಬಹುತೇಕ ಆಸ್ತಿಗಳನ್ನು ಗಣಕೀಕರಣಗೊಳಿಸಲಾಗಿದೆ.

ಏಳೇ ದಿನಗಳಲ್ಲಿ ಅರ್ಜಿ ವಿಲೇವಾರಿ


ಇನ್ಮುಂದೆ ಇ-ಸ್ವತ್ತು, ಖಾತೆ ಬದಲಾವಣೆ ಕೋರಿ ಸಲ್ಲಿಕೆಯಾಗುವ ಅರ್ಜಿ ನೇರವಾಗಿ ಬಿಲ್ ಕಲೆಕ್ಟರ್ ಲಾಗಿನ್‌ಗೆ ಹೋಗಲಿದೆ. ಅವರು 3 ದಿನದಲ್ಲಿ ಆ ಅರ್ಜಿಯನ್ನು ಮುಂದಕ್ಕೆ ಕಳುಹಿಸಬೇಕು. ಅಲ್ಲಿಂದ ಕಂದಾಯ ನಿರೀಕ್ಷಕರ ಲಾಗಿನ್‌ಗೆ ಹೋಗಲಿದ್ದು, ಎರಡು ದಿನದಲ್ಲಿ ಅಲ್ಲಿಂದ ಮುಂದಕ್ಕೆ ಹೋಗಬೇಕು. ನಂತರ ಆಯುಕ್ತರ ಲಾಗಿನ್‌ಗೆ ಬರಲಿದ್ದು, ಒಟ್ಟಾರೆ ಏಳು ದಿನಗಳಲ್ಲಿ ಅರ್ಜಿ ವಿಲೇವಾರಿ ಆಗಲಿದೆ.


ಮೊದಲು ಬಂದ ಅರ್ಜಿ ಮೊದಲು ವಿಲೇವಾರಿ ಆಗಲಿದೆ. ಯಾರ ಲಾಗಿನ್‌ನಲ್ಲೂ ಹೆಚ್ಚು ದಿನ ಉಳಿಸಿಕೊಳ್ಳಲು ಆಗುವುದಿಲ್ಲ. ಖಾತೆ ಬದಲಾವಣೆ ಅರ್ಜಿ 45 ದಿನಗಳಲ್ಲಿ ವಿಲೇವಾರಿ ಆಗಲಿದೆ. ಕಟ್ಟಡ ಪರವಾನಗಿ ಮತ್ತು ವಾಣಿಜ್ಯ ಪರವಾನಗಿ ಅರ್ಜಿ ವಿಲೇವಾರಿಗೆ ಇನ್ನೂ ಕಾಲಮಿತಿ ನಿಗದಿಯಾಗಿಲ್ಲ. ಮುಂದಿನ ದಿನಗಳಲ್ಲಿ ಈ ಅರ್ಜಿಗಳಿಗೂ ಕಾಲಮಿತಿ ನಿಗದಿಯಾಗಲಿವೆ.


ಹೇಗೆ ನಡೆಯಲಿದೆ ಅರ್ಜಿ ಪ್ರಕ್ರಿಯೆ?


ಈ ಮೊದಲು ಆಸ್ತಿ ಮಾಲೀಕರು ಸಲ್ಲಿಸಿದ ಅರ್ಜಿಗಳು ಡಾಟಾ ಎಂಟ್ರಿ ಆಪರೇಟರ್‌ಗಳು, ವಿಷಯ ನಿರ್ವಾಹಕರ ಲಾಗಿನ್‌ಗಳಿಗೆ ಬರುತ್ತಿದ್ದವು. ಇದೀಗ ಪೌರಾಡಳಿತ ಇಲಾಖೆಯು ಇ-ತಂತ್ರಾಂಶದ ಕಾರ್ಯ ವಿಧಾನದಲ್ಲಿ ಬದಲಾವಣೆ ಮಾಡಿದ್ದು; ಆಸ್ತಿ ಮಾಲೀಕರು ಸಲ್ಲಿಸಿರುವ ಅರ್ಜಿಗಳು ನೇರವಾಗಿ ಕರ ಕಸೂಲಿಗಾರರ (ಬಿಲ್ ಕಲೆಕ್ಟರ್) ಲಾಗಿನ್‌ಗೆ ಬರುತ್ತವೆ.


ಬಿಲ್ ಕಲೆಕ್ಟರ್ ಅರ್ಜಿ ಪರಿಶೀಲಿಸಿ, ಸ್ಥಳ ಭೇಟಿ ನೀಡಿ, ಕಂದಾಯ ನಿರೀಕ್ಷಕರಿಗೆ ಕಳುಹಿಸುತ್ತಾರೆ. ಅಲ್ಲಿಂದ ಕಡತವು ಕಂದಾಯ ಅಧಿಕಾರಿಗೆ ಹೋಗುತ್ತದೆ. ಅಲ್ಲಿ ಪರಿಶೀಲನೆ ನಡೆದು ಕೊನೆಯದಾಗಿ ಮುಖ್ಯಾಧಿಕಾರಿ ಬಳಿಗೆ ಹೋಗುತ್ತದೆ. ಈ ಪ್ರಕ್ರಿಯೆಗಳು ಏಳು ದಿನಗಳಲ್ಲಿ ಮುಗಿಯಬೇಕು. ಒಬ್ಬೊಬ್ಬ ಅಧಿಕಾರಿ ಬಳಿ ಅರ್ಜಿ ಗರಿಷ್ಠ ಎಷ್ಟು ದಿನ ಇರಬಹುದು ಎಂಬುದನ್ನೂ ಹೊಸ ವ್ಯವಸ್ಥೆಯಲ್ಲಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?


ಆಸ್ತಿ ಮಾಲೀಕರು ಪೌರಾಡಳಿತ ಇಲಾಖೆಯ ಇ-ಆಸ್ತಿ ತಂತ್ರಾಂಶದ ಮೂಲಕ ನೇರವಾಗಿ ನೋಂದಣಿಯಾಗಿ, ಬಳಿಕ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿ ಇಲಾಖೆಯ http://eaasthi.mrc.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ, e-AASTHI Citizen Application ಕೊಂಡಿ ಕ್ಲಿಕ್ ಮಾಡಿ, ನೋಂದಣಿ ಮಾಡಿಕೊಳ್ಳಬೇಕು. ನಂತರ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು.


ಸ್ವತಃ ಅರ್ಜಿ ಸಲ್ಲಿಸಲು ಸಾಧ್ಯವಾಗದವರಿಗೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಕಚೇರಿ ಆವರಣದಲ್ಲಿಯೇ ಸಹಾಯವಾಣಿ ಕೇಂದ್ರ ತೆರೆಯಲಾಗುತ್ತದೆ. ಆಸ್ತಿ ಮಾಲೀಕರು ಈ ಕೇಂದ್ರದಿ೦ದ ಅರ್ಜಿ ಹಾಕಬಹುದು. ಇದಕ್ಕಾಗಿ ₹10 ಶುಲ್ಕ ನಿಗದಿಪಡಿಸಲಾಗಿದೆ. ಕರ್ನಾಟಕ ಒನ್ ಕೇಂದ್ರದಲ್ಲೂ ಆನ್‌ಲೈನ್‌ನಲ್ಲಿ ಅರ್ಜಿ ಹಾಕುವ ಸೌಲಭ್ಯ ಕಲ್ಪಿಸಲಾಗುತ್ತದೆ.


ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು?


ಅರ್ಜಿ ಸಲ್ಲಿಸುವವರು ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ಹೊಂದಿರುವುದು ಕಡ್ಡಾಯ. ಇದಲ್ಲದೆ, ಹಕ್ಕು ನಿರೂಪಿಸುವ ದಾಖಲೆ (ಕ್ರಯ/ ದಾನ/ ಬಿಡಿಗಡೆ/ ವಿಭಜನಾ ಪತ್ರ ಇತ್ಯಾದಿ), ಖಾತೆ ಪ್ರಮಾಣ ಪತ್ರ/ ಖಾತೆ ದೃಢೀಕರಣ/ ಉತ್ತರ ಪತ್ರ, ಆಸ್ತಿ ತೆರಿಗೆ ಪಾವತಿಸಿದ ರಸೀದಿ, ಸ್ವತ್ತಿಗೆ ಸಂಬAಧಿಸಿದ ವಿವರಗಳ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿಯಲ್ಲಿ ಈ ದಾಖಲೆಗಳನ್ನು ಅಚ್ಚುಕಟ್ಟಾಗಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.


ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ ಪೌರಾಡಳಿತ ಇಲಾಖೆಯ ಇ-ಆಸ್ತಿ ತಂತ್ರಾಂಶಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ…

Previous Post Next Post

Ads

Ads

نموذج الاتصال

×