ಲಾರಿಗೆ ಭೀಕರವಾಗಿ ಕಾರು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಎಂ ಸ್ಯಾಂಡ್ ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿಸಿದ್ದಾರೆ. ನಾಗಮಂಗಲ ತಾಲ್ಲೂಕು ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ತಿರುಮಲಾಪುರ ಗ್ರಾಮದ ಬಳಿ ಭಾನುವಾರ ನಸುಕಿನ ವೇಳೆ ಅಪಘಾತ ಸಂಭವಿಸಿದೆ.
ಮೃತರಲ್ಲಿ ಮಾಗಡಿ ತಾಲ್ಲೂಕು ಲಕ್ಕೇನಹಳ್ಳಿ ಗ್ರಾಮದ ಹೇಮಂತ್ (24), ಶರತ್ (28) ಗುರುತು ಪತ್ತೆಯಾಗಿದೆ, ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ. ಲಾರಿ ಎಂ ಸ್ಯಾಂಡ್ ತುಂಬಿಕೊಂಡು ಚನ್ನರಾಯಪಟ್ಟಣಕ್ಕೆ ತೆರಳುತ್ತಿತ್ತು. ಹಿಂದಿನಿಂದ ವೇಗವಾಗಿ ಬಂದ ಶೆವರ್‌ಲೆಟ್ ಸ್ಪಾರ್ಕ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿಡಲಾಗಿದೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ ಇಂತಹದ್ದೇ ಇನ್ನೆರಡು ಬೀಕರ ಅಪಘಾತಗಳು ವರದಿಯಾಗಿದ್ದರು. ಕೊಳ್ಳೇಗಾಲ ಮತ್ತು ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿನ ಕುರುಬೂರು ಗ್ರಾಮದ ಪಿಂಜರ ಪೋಲ್ ಎಂಬಲ್ಲಿ ಭೀಕರ ಅಪಘಾತ ಸಂಭವಿಸಿ ಹನ್ನೊಂದು ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು.
ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಅಪಘಾತ ಸಂಭವಿಸಿತ್ತು. ಸೋಮವಾರ ಮಧ್ಯಾಹ್ನ ಟಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಬಳಿಕ ಇನೋವಾ ಕಾರು ಖಾಸಗಿ ಬಸ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿತ್ತು.
ಅಪಘಾತದ ಭೀಕರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದವರು ಕೂಡ ಆಸ್ಪತ್ರೆ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದರು.
ಕಾರಿನಲ್ಲಿ ಇಬ್ಬರು ಮಕ್ಕಳು ಹಾಗೂ ಮಹಿಳೆಯರು ಸೇರಿ ಮಂದಿ ಇದ್ದರು. ಖಾಸಗಿ ಬಸ್ ಕೊಳ್ಳೇಗಾಲದ ಕಡೆಗೆ ಹೋಗುತ್ತಿತ್ತು.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಕಲಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಭಾನುವಾರ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಆರು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಸೊಲ್ಲಾಪುರದ ಜಯಶ್ರೀ ಕಾಂಬಳೆ (25), ಚಾಲಕ ರಾಘವೇಂದ್ರ ಕಾಂಬಳೆ (28), ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ನಂದ್ರಾಳ ಗ್ರಾಮದ ಖಾಜಪ್ಪ ಬನಸೋಡೆ (36), ಶಿರನಾಳದ ಅಕ್ಷಯ ಶಿವಶರಣ (22), ರಾಕಿ (4) ಮತ್ತು ರಶ್ಮಿಕಾ (2) ಮೃತಪಟ್ಟಿದ್ದರು.