ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಜೂನ್ 2, 2023 ರಂದು ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದು, 800ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಜೂನ್ 2ರ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಬಹನಾಗ ನಿಲ್ದಾಣದಲ್ಲಿ’ಸ್ಟಾಪ್’ ಇರಲಿಲ್ಲ.
ಹೀಗಾಗಿ ಗಂಟೆಗೆ 127 ಕಿ.ಮೀ. ವೇಗದಲ್ಲಿ ಬರುತ್ತಿದ್ದ ರೈಲಿಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ಆದರೆ, ಈ ವೇಳೆ ಈಗಾಗಲೇ ಗೂಡ್ಸ್ ರೈಲು ನಿಂತಿರುವ ಹಳಿಯ ಮೇಲೆ ರೈಲು ಚಲಿಸಿದೆ. ಹೀಗಾಗಿ ನಿಂತಿದ್ದ ಗೂಡ್ಸ್ ರೈಲಿಗೆ ‘ಕೋರಮಂಡಲ್ ಎಕ್ಸ್‌ಪ್ರೆಸ್’ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಗೂಡ್ಸ್ ರೈಲಿನ ಬೋಗಿಯ ಮೇಲೆ ಹತ್ತಿದರೆ, ಅದರ 13 ಬೋಗಿಗಳು ಹಳಿ ತಪ್ಪಿ ಚಲ್ಲಾಪಿಲ್ಲಿಯಾಗಿ ಉರುಳಿ ಬಿದ್ದಿವೆ. ಹಳಿ ತಪ್ಪಿದ ಬೋಗಿಗಳಲ್ಲಿ ಹಲವು ಬೋಗಿಗಳು ಪಕ್ಕದ ಹಳಿಯ ಮೇಲೂ ಉರುಳಿ ಬಿದ್ದಿವೆ.
ಇದಾಗಿ ನಾಲ್ಕೇ ನಿಮಿಷದೊಳಗೆ ‘ಹೌರಾ-ಯಶವಂತಪುರ’ ರೈಲು ಸಹ ಅದೇ ನಿಲ್ದಾಣಕ್ಕೆ ಬಂದಿದೆ. ಪಕ್ಕದ ಹಳಿಯಿಂದ ಉರುಳಿ ಬಿದ್ದಿದ್ದ ಅಪಘಾತಗೊಂಡ ರೈಲಿನ ಬೋಗಿಗಳಿಗೆ ಹೌರಾ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಇದರಿಂದ ಆ ರೈಲಿನ 3 ಬೋಗಿಗಳೂ ಉರುಳಿ ಬಿದ್ದಿವೆ.
ಈ ಭೀಕರ ರೈಲು ಅಪಘಾತ ನಡೆದ ಸ್ವಲ್ಪ ಸಮಯದಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ರೈಲು ಅಪಘಾತ ನಡೆದ ಸ್ಥಳದಲ್ಲಿ ಮಸೀದಿ ಇರುವುದರಿಂದ ಈ ಘಟನೆ ನಡೆದಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕೋಮು ದ್ವೇಷದ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
BJP ವಕ್ತಾರೆ ಶಕುಂತಲ ನಟರಾಜ್ ಎಂಬುವವರು ರೈಲು ದುರಂತದ ಫೋಟೊವನ್ನು ಹಂಚಿಕೊಂಡು ದುರಂತ ನಡೆದ ಸಮೀಪವೇ ಇರುವ ಒಂದು ಧಾರ್ಮಿಕ ಕೇಂದ್ರದ ಚಿತ್ರವನ್ನು ಗುರುತು ಮಾಡಿ ಮಸೀದಿ ಇರುವ ಜಾಗದಲ್ಲಿ ಅಪಘಾತ ನಡೆದಿದೆ ಎಂದು ಚಿತ್ರಿಸಿ ಕೋಮು ವೈಶಮ್ಯದ ಹಿನ್ನಲೆಯಲ್ಲಿ ಹಂಚಿಕೊಂಡಿದ್ದಾರೆ.
ದಿ ರಾಂಡಮ್ ಇಂಡಿಯಾ ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದು “ಜಸ್ಟ್ ಸೇಯಿಂಗ್, ನಿನ್ನೆ ಶುಕ್ರವಾರ” ಎಂದು ಬರೆಯಲಾಗಿದೆ. ಇದನ್ನು ಹೇಳುವ ಮೂಲಕ, ಬಳಕೆದಾರರು ಅಪಘಾತಕ್ಕೆ ಮುಸ್ಲಿಮರು ಹೊಣೆ ಎಂಬ ಅರ್ಥದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ. ರೈಲು ಅಪಘಾತವು ಮುಸ್ಲಿಮರ ಯೋಜಿತ ದಾಳಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
“ಇದು ಶುಕ್ರವಾರ ಮತ್ತು ಪಕ್ಕದಲ್ಲಿ ಮಸೀದಿ ಇದೆ. ಜಿಹಾದ್ ನಡೆಸಲು ಹೆದ್ದಾರಿಗಳು ಮತ್ತು ರೈಲ್ವೆ ಹಳಿಗಳ ಪಕ್ಕದಲ್ಲಿ ಮುಸ್ಲಿಂ ಕಾಲೋನಿಗಳು ಮತ್ತು ಮಸೀದಿಗಳನ್ನು ಬೆಳೆಸಲಾಗುತ್ತಿದೆ ಎಂಬ ಕೋಮು ದ್ವೇಷದ ಹಿನ್ನಲೆಯಲ್ಲಿ ಫೊಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಚಿತ್ರಗಳಲ್ಲಿ ಗುರುತು ಮಾಡಿದಂತೆ ರೈಲು ಅಪಘಾತ ನಡೆದ ಸ್ಥಳದಲ್ಲಿ ಮಸೀದಿ ಇರುವುದು ನಿಜವೇ? ಈ ಅಪಘಾತದ ಹಿಂದೆ ನಿಜವಾಗಿಯೂ ಮುಸ್ಲಿಮರ ಪಿತೂರಿ ಇದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವೈರಲ್ ಚಿತ್ರದಲ್ಲಿ ಕಂಡುಬರುವ ಗುರುತು ಮಾಡಲಾದ ಧಾರ್ಮಿಕ ಕೇಂದ್ರ ಮಸೀದಿಯಲ್ಲ ಎಂದು ಸ್ಪಷ್ಟವಾಗಿದೆ. ಬದಲಿಗೆ ಗುರುತು ಮಾಡಿರುವ ಚಿತ್ರ ದೇವಸ್ಥಾನ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.
ಅಪಘಾತ ನಡೆದ ಸ್ಥಳದಲ್ಲಿ ಹಾಜರಿದ್ದ ಪತ್ರಕರ್ತ ತಮಲ್ ಸಹಾ ಅವರನ್ನು ಆಲ್ಟ್‌ನ್ಯೂಸ್ ತಂಡ ಸಂಪರ್ಕಿಸಿದೆ. ಘಟನೆ ನಡೆದ ಸ್ಥಳಕ್ಕೆ ಸಮೀಪದಲ್ಲಿ ಕಂಡುಬರುವ ರಚನೆಯು ನಿಜವಾಗಿಯೂ ದೇವಾಲಯವಾಗಿದೆ ಎಂದು ಅವರು ಆಲ್ಟ್ ನ್ಯೂಸ್‌ಗೆ ಖಚಿತಪಡಿಸಿದ್ದಾರೆ.
ಆಲ್ಟ್‌ನ್ಯೂಸ್ ತಂಡಕ್ಕೆ ಮಾಹಿತಿ ನೀಡಿರುವ ಪತ್ರಕರ್ತ ತಮಾಲ್ ಸಹಾ ಅವರು ದೇವಾಲಯಕ್ಕೆ ಭೇಟಿ ನೀಡಿ, ದೇವಾಲಯದ ಹೊರಗೆ ಇಸ್ಕಾನ್ ಬಹನಾಗ ಎಂಬ ಬೋರ್ಡ್‌ನ ಚಿತ್ರವನ್ನು ಕಳುಹಿಸಿದ್ದಾರೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ದೇವಸ್ಥಾನದ ಪ್ರವೇಶ ದ್ವಾರದ ಚಿತ್ರವನ್ನು ನೋಡಬಹುದು.
ಉದ್ದೇಶಿತ ಮಸೀದಿಯನ್ನು ತೋರಿಸುವ ವೈರಲ್ ಚಿತ್ರ ಮತ್ತು ರಾಯಿಟರ್ಸ್ ವರದಿಯಲ್ಲಿನ ಚಿತ್ರಗಳನ್ನು ಹೋಲಿಕೆ ಮಾಡಿದಾಗ ಈ ಮೂರು ಚಿತ್ರಗಳು ಒಂದೇ ಎಂಬುದು ಸ್ಪಷ್ಟವಾಗುತ್ತದೆ. ಅಂದರೆ, ವೈರಲ್ ಪೋಸ್ಟ್‌ಗಳಲ್ಲಿ, ಅದನ್ನು ಮಸೀದಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದ್ದು, ಅದು ನಿಜವಾಗಿಯೂ ದೇವಾಲಯವಾಗಿದೆ.
ದೇವಾಲಯದ ಹೊರಗಿನ ರಸ್ತೆಯನ್ನು ಸೆರೆಹಿಡಿಯಲಾದ ಮತ್ತೊಂದು ವಿಡಿಯೊವನ್ನು ಕೆಳಗೆ ನೀಡಲಾಗಿದೆ.
ಬಹನಾಗಾದ ಇಸ್ಕಾನ್ ದೇವಾಲಯದ ಆಡಳಿತ ಮಂಡಳಿಯ ಸದಸ್ಯರನ್ನು ಆಲ್ಟ್‌ನ್ಯೂಸ್ ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಅವರು ದೇವಾಲಯದ ಸಮೀಪವಿರುವ ಹಳಿಗಳ ಮೇಲೆ ರೈಲು ಅಪಘಾತ ಸಂಭವಿಸಿರುವುದನ್ನು ಖಚಿತಪಡಿಸಿದ್ದಾರೆ. ಅಪಘಾತ ಸ್ಥಳದ ವೈರಲ್ ಚಿತ್ರದಲ್ಲಿ ಟ್ರ್ಯಾಕ್‌ಗಳ ಪಕ್ಕದಲ್ಲಿ ಕಂಡುಬರುವ ರಚನೆಯು ಇಸ್ಕಾನ್ ದೇವಾಲಯವಾಗಿದೆ ಎಂದು ಅವರು ದೃಢಪಡಿಸಿದ್ದಾರೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಬಾಲಸೋರ್‌ನಲ್ಲಿನ ರೈಲು ಅಪಘಾತದ ಸ್ಥಳದ ಡ್ರೋನ್-ವೀಕ್ಷಣೆ ಚಿತ್ರದಲ್ಲಿ ಕಂಡುಬರುವ ಬಿಳಿ ರಚನೆಯು ಮಸೀದಿಯಲ್ಲ, ಬಹನಾಗಾದಲ್ಲಿರುವುದು ಇಸ್ಕಾನ್ ದೇವಾಲಯ ಎಂಬುದು ಸ್ಪಷ್ಟವಾಗಿದೆ.
ಈ ಬಿಳಿಯ ರಚನೆಯ ಧಾರ್ಮಿಕ ಕೇಂದ್ರಕ್ಕೂ ಅಪಘಾತಕ್ಕೂ ಸಂಬಂಧ ಇದೆ ಎಂಬ ಹೇಳಿಕೆಯು ತಪ್ಪಾಗಿದ್ದು ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸುಳ್ಳು ಪ್ರತಿಪಾದನೆಯೊಂದಿಗೆ ಮಸೀದಿ ಇರುವ ಜಾಗದಲ್ಲಿ ಒಡಿಶಾ ರೈಲು ಅಪಘಾತವಾಗಿದೆ ಎಂದು ಸುಳ್ಳು ಮತ್ತು ಕೋಮು ದ್ವೇಷದ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಅಪಘಾತಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ರೈಲ್ವೆ ಇಲಾಖೇ ತನಿಖೆ ನಡೆಸುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.