ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಲು ಹೋಗಿ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಪಕ್ಷ ಪೇಚಿಗೆ ಸಿಲುಕಿಕೊಂಡಿದೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ರಾಜ್ಯದ ಬೊಕ್ಕಸದಲ್ಲಿ ದುಡ್ಡಿಲ್ಲ, ಎಲ್ಲವೂ ಮುಳುಗುವ ಹಾದಿಯಲ್ಲಿವೆ ಎಂದು ಫೇಸ್‌ಬುಕ್ ಪೋಸ್ಟ್ ಹಾಕುವ ಮೂಲಕ ತನ್ನ ಕೆಟ್ಟ ಆಡಳಿತವನ್ನು ಒಪ್ಪಿಕೊಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
“ರಾಜ್ಯದಲ್ಲಿ ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನಕ್ಕೆ ಪತರುಗುಟ್ಟುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರ ಸಿಕ್ಕ ಸಿಕ್ಕ ಇಲಾಖೆಗೆ ‘ಕೈ’ ಹಾಕಿ ಆರ್ಥಿಕ ದಿವಾಳಿ ಎಬ್ಬಿಸುತ್ತಿದೆ.
ಬಿಎಂಟಿಸಿ- ಆರ್ಥಿಕ ಇಂಧನವಿಲ್ಲ
ಜಲಮಂಡಳಿ- ಹಣಕಾಸಿನ ಹಾಹಾಕಾರ
ಕೆಎಸ್‌ಆರ್‌ಟಿಸಿ – ನಷ್ಟದ ಹೆದ್ದಾರಿಯಲ್ಲಿ
ವಿದ್ಯುತ್ ಸರಬರಾಜು ಕಂಪೆನಿಗಳು – ಮುಳುಗುವ ಹಾದಿಯಲ್ಲಿ
ಇನ್ನು ಹಲವು ಇಲಾಖೆಗಳ ಸಂಸ್ಥೆಗಳು ಅಧಃಪತನದ ಪಟ್ಟಿಯಲ್ಲಿದ್ದು,
‘ಅರ್ಥ’ವಿಲ್ಲದ #ATMSarkara ಸೃಷ್ಟಿಸಿರುವ ಅರಾಜಕತೆಗೆ ಬಲಿಯಾಗಲು ‘ಸಿದ್ದ’ವಾಗಿವೆ” ಎಂದು ಬಿಜೆಪಿ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಕಾಂಗ್ರೆಸ್ ಸರಕಾರ ಬಂದು ಎಷ್ಟು ದಿನ ಆಯಿತು. ಈ ಬಿಜೆಪಿಯವರು ಎಷ್ಟು ವರ್ಷ ಇದ್ದರು? ಇನ್ನೂ ಬಜೆಟೇ ಆಗಿಲ್ಲ! ಅಷ್ಟರಲ್ಲೇ ಸರಕಾರವನ್ನು ದೂರುವ ಭರದಲ್ಲಿ ತಮ್ಮ ವೈಫಲ್ಯವನ್ನೇ ಹರಾಜು ಹಾಕಿದ್ದಾರೆ ಈ ಬಿಜೆಪಿ ಮೂರ್ಖರು! ಮಹಾನ್ ಬುದ್ಧಿವಂತಿಕೆ ತೋರಲು ಹೋಗಿ ಶತಮೂರ್ಖರಾಗುವುದು ಹೀಗೆಯೇ! ಎಂದು ಹಿರಿಯ ಪತ್ರಕರ್ತ ನಿಖಿಲ್ ಕೋಲ್ಪೆ ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕ ದಿವಾಳಿ ಎಬ್ಬಿಸಿ ಬಂದಿದ್ದೇವೆ, ಹೇಗೆಲ್ಲಾ ಗ್ಯಾರಂಟಿ ನೀಡ್ತಾರೆ ಅಂತ ತಲೆ ಕೆಡಿಸಿಕೊಂಡಿದ್ದ ಬಿಜೆಪಿಗೆ ಅವರ ಐಟಿ ಸೆಲ್ ಬಿಜೆಪಿ ಸರ್ಕಾರ #ATMSarkara ಆಗಿತ್ತು ಅಂತ ಎಸ್ಟು ಸಲೀಸಾಗಿ ಹೇಳಿದ್ದಾರೆ ನೋಡಿ ಎಂದು ರಾಮಚಂದ್ರ ಕಲ್ಲೇರ್ ಹೇಳಿದ್ದಾರೆ.
40% ಬ್ರಸ್ಟಾಚರವನ್ನು ನಾವು ಮಾಡಿದ್ದೊ ಅನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದು ಕೀಲಾರ ನಾಗೇಗೌಡ ಶಿವಲಿಂಗಯ್ಯ ಬರೆದಿದ್ದಾರೆ.
ನನಗೆ ಬಿಜೆಪಿಗರ ‘ಪ್ರಾಮಾಣಿಕತೆ’ ಬಹಳ ಇಷ್ಟ. 10 ದಿನಗಳಷ್ಟೆ ಮುಗಿಸಿರುವ ಕಾಂಗ್ರೇಸ್ ಸರ್ಕಾರವನ್ನು ಟೀಕಿಸಲು ಹೋಗಿ ಬಿಜೆಪಿ ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಿದೆ. ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಯಾವೆಲ್ಲಾ ಇಲಾಖೆಗಳನ್ನು ದಿವಾಳಿ ಮಾಡಿಟ್ಟಿದೆ ಎಂದು ಅವರದ್ದೇ ಮಾತಲ್ಲಿ ಓದಿ ಫ್ರೆಂಡ್ಸಾ! ಇವರ ಪೇಜ್ ಆಡ್ಮಿನ್ ಗಳು ಗುಂಡು ಹಾಕಿ ಕೊನೆಗೆ ತಮ್ಮದು ATM ಸರ್ಕಾರವಾಗಿತ್ತೆಂದೂ ಒಪ್ಕಂಡಿವೆ. ಡಬ್ಬಲ್ ಇಂಜಿನ್ ಸರ್ಕಾರದ ಬೊಕ್ಕಸ ಬರಿದಾಗಿಸಿರುವ ಅಮೋಘ ಸಾಧನೆಗಳನ್ನು ಸೇರ್ ಮಾಡುವ ಫ್ರೆಂಡ್ಸಾ.
ಹಲಾಲ್ ಹಿಜಾಬ್ ಗಳಲ್ಲಿ ಮುಳುಗಿದ್ದ ಬಿಜೆಪಿ ತನ್ನ ಸಾಧನೆಗಳ ಬಗ್ಗೆ ಕೊನೆಗೂ ಸತ್ಯ ಹೇಳಿದೆ ಎಂದು ಹಿರಿಯ ಲೇಖಕರಾದ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆರನೇ ಸಾಧನೆ .. ಕರ್ನಾಟಕವನ್ನು ಹಲಾಲ್, ಹಿಜಾಬ್, ಹರಿಯೋಂ ಅಂತ ಉಪಯೋಗವಿಲ್ಲದ ಭಜನೆಯಲ್ಲಿ ಮುಳುಗಿಸಿದ್ದ ಬಿಜೆಪಿಯನ್ನು ಮೇಲೆತ್ತಿ ರಿಯಲ್ ಸಮಸ್ಯೆಗಳ ಕುರಿತು ಮಾತನಾಡುವಂತೆ ಮಾಡಿದ್ದು. ಅಂದಹಾಗೆ ಕೆಳಗಿನ ಎಲ್ಲಾ ಸಮಸ್ಯೆಗಳು ಹಿಂದಿನ ಸರ್ಕಾರದಲ್ಲೇ ಇತ್ತು, ಈಗ ನೆನಪಾಯ್ತು ಅಷ್ಟೇ ಎಂದು ಗಣೇಶ್ ಬರೆದಿದ್ದಾರೆ.