ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ.. ಯೋಜನೆಗೆ ಮಾ.23 ರಂದು ಸಿಎಂ ಚಾಲನೆ

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಗೆ ಚಾಲನೆ ನೀಡುವ ಸಂಬಂಧ, ಜಿಲ್ಲಾ ಪಂಚಾಯಿತಿ ಸಿಇಒಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.



ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗೆ ಚಾಲನೆ ನೀಡುವ ಸಂಬಂಧ ಇಂದು ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ವೀಡಿಯೊ ಸಂವಾದ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಯುವಜನ ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ಸಚಿವ ಕೆ.ಸಿ.ನಾರಾಯಣ ಗೌಡ, ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್ ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಯುವಶಕ್ತಿ ಸಂಘ ಯೋಜನೆಗೆ ಮಾ.23 ರಂದು ಚಾಲನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಗೆ ಮಾರ್ಚ್‌ 23 ರಂದು ಚಾಲನೆ ನೀಡಲಿದ್ದಾರೆ. ಈ ಕುರಿತು ಇಂದಿನ ಸಭೆಯಲ್ಲಿ ಸಂಘಗಳ ರಚನೆಯ ಪ್ರಗತಿಯ ಕುರಿತು ಮಾಹಿತಿ ಪಡೆದರು. ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಬಹಳ ವರ್ಷಗಳಿಂದ ಸಕ್ರಿಯವಾಗಿವೆ. ಆದರೆ ಯುವಕರಿಗಾಗಿ ಮೊದಲ ಬಾರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಇಂತಹ ಯೋಜನೆಯನ್ನು ರೂಪಿಸಲಾಗಿದ್ದು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.

ಜಂಟಿ ಬಾಧ್ಯತಾ ಗುಂಪುಗಳ ರಚನೆಯಾಗಿ, ಸುತ್ತು ನಿಧಿ ಹಂಚಿಕೆಯೊಂದಿಗೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಈ ಗುಂಪುಗಳು ಯೋಜನೆಯನ್ನು ಗುರುತಿಸಿ, ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು, ತಮ್ಮ ಉದ್ದಿಮೆಯನ್ನು ಸ್ಥಾಪಿಸಿ, ಉತ್ಪಾದನೆ ಪ್ರಾರಂಭಿಸುವ ವರೆಗೂ ನೀವು ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಸೂಚಿಸಿದರು. ಯೋಜನೆಗಳನ್ನು ಗುರುತಿಸಲು ನಿಯೋಜಿಸಿರುವ ಸಮಾಲೋಚಕರು, ಯುವಕರು ಕೈಗೊಳ್ಳುವ ಯೋಜನೆಗೆ ಅನುಗುಣವಾಗಿ, ಆಯಾ ಕ್ಷೇತ್ರದ ಪರಿಣತರಿಂದಲೇ ತರಬೇತಿ ನೀಡಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.

ಯುವಶಕ್ತಿ ಸಂಘಗಳಿಗೆ ಸಾಲ ನೀಡುವಾಗ, ಯೋಜನಾ ಮೊತ್ತ ಹೆಚ್ಚಾಗಿದ್ದು, ಅವು ಲಾಭದಾಯಕ ಯೋಜನೆಗಳಾದರೆ, ಬ್ಯಾಂಕುಗಳು ಸರ್ಕಾರ ನಿಗದಿಪಡಿಸಿದ 5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಿ, ಯುವಕರನ್ನು ಬೆಂಬಲಿಸಬೇಕೆಂದು ಮುಖ್ಯಮಂತ್ರಿಗಳು ಬ್ಯಾಂಕರುಗಳಿಗೆ ಸಲಹೆ ನೀಡಿದರು. ಸಭೆಯಲ್ಲಿ ಯುವ ಸಬಲೀಕರಣ, ಕ್ರೀಡೆ ಮತ್ತು ರೇಷ್ಮೆ ಸಚಿವ ನಾರಾಯಣ ಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.


ಯೋಜನೆಯ ಈ ವರೆಗಿನ ಪ್ರಗತಿ :

• ರಾಜ್ಯದಲ್ಲಿ ಒಟ್ಟು 5951 ಗ್ರಾಮ ಪಂಚಾಯತಿಗಳಿದ್ದು, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ, ಪ್ರತಿ ಗ್ರಾಮ ಪಂಚಾಯತಿಗೆ ಎರಡು ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಲು ಆರ್ಥಿಕ ಇಲಾಖೆಯ ಸಹಮತಿಯನ್ವಯ ಮಾ.8ರಂದು ಆದೇಶ ಹೊರಡಿಸಲಾಗಿದೆ.

• ಅದರನ್ವಯ ಮಾ.18ರ ಅಂತ್ಯಕ್ಕೆ ಒಟ್ಟು 6509 ಜಂಟಿ ಬಾಧ್ಯತಾ ಗುಂಪುಗಳು ರಚನೆಯಾಗಿರುತ್ತದೆ. ಉಳಿದಂತೆ 5393 ಜಂಟಿ ಬಾಧ್ಯತಾ ಗುಂಪುಗಳು ರಚನೆಯಾಗಬೇಕಾಗಿದೆ. ಈಗಾಗಲೇ 1754 ಜಂಟಿ ಭಾದ್ಯತಾ ಗುಂಪುಗಳಿಗೆ ತಲಾ ರೂ.10,000/-ಗಳಂತೆ ಒಟ್ಟು ರೂ.1.75ಕೋಟಿಗಳ ವೆಚ್ಚದಲ್ಲಿ ಸುತ್ತು ನಿಧಿಯನ್ನು ಪಾವತಿಸಲಾಗಿದೆ.

• 100 ಮಾದರಿ ಪ್ರಸ್ತಾವನೆಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಲಾಗಿದ್ದು, ಈ ಪೈಕಿ ಸುಮಾರು 551 ಯೋಜನೆಗಳನ್ನು ಬ್ಯಾಂಕುಗಳ ಅನುಮೋದನೆ ಮತ್ತು ಸಾಲ ಮಂಜೂರಾತಿಗಾಗಿ ಸಲ್ಲಿಸಲಾಗಿದೆ.

• ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯ ಬ್ಯಾಂಕ್‌ ಲಿಂಕೇಜ್‌, ಖಾತೆ ತೆರೆಯುವಿಕೆ ಮತ್ತು ಬ್ಯಾಂಕ್‌ ಸಾಲಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳಲು ಸಾಮಾನ್ಯ ಸರ್ವಿಸ್‌ ಸೆಂಟರ್‌, ಭಾರತೀಯ ಸ್ಟೇಟ್‌ ಬ್ಯಾಂಕ್‌ ಹಾಗೂ ಎನ್.ಎಲ್‌.ಎಂ. ನಿಂದ ಹಾಗೂ ಬ್ಯಾಂಕರ್ಸ್‌ಗಳಿಂದ ಒಟ್ಟು 7300 ಬಿ.ಸಿ. ಸಖಿಗಳ ಸೇವೆಯನ್ನು ಪಡೆಯಲಾಗುತ್ತಿದ್ದು, ಸದರಿಯವರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ರೂ.2000/- ಹಾಗೂ ಸಹಕಾರಿ ಬ್ಯಾಂಕ್‌ಗಳಿಂದ ರೂ.4000/- ಪ್ರೋತ್ಸಾಹ ಧನ ನೀಡಲಾಗುತ್ತಿದೆ.

• ಎನ್​ಸಿಜಿಟಿಸಿ ಯೋಜನೆ ಅಡಿಯಲ್ಲಿ ಸ್ವ-ಸಹಾಯ ಗುಂಪುಗಳ ಮಾದರಿಯಲ್ಲಿ ಜಂಟಿ ಬಾಧ್ಯತಾ ಗುಂಪುಗಳನ್ನು ಒಳಪಡಿಸಲು ಈಗಾಗಲೇ ಸನ್ಮಾನ್ಯ ಮುಖ್ಯಮಂತ್ರಿಯವರಿಂದ ಮಾನ್ಯ ಕೇಂದ್ರ ವಿತ್ತೀಯ ಸಚಿವರಿಗೆ ಫೆ.6ರಂದು ಪ್ರಸ್ತಾಪಿಸಲಾಗಿದೆ.

Previous Post Next Post

Ads

Ads

نموذج الاتصال

×