ಬೆಂಗಳೂರು: ಮೈಸೂರು-ಸತ್ಯಮಂಗಲಂ ನಡುವಣ ರಾಷ್ಟ್ರೀಯ ಹೆದ್ದಾರಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ಕರ್ನಾಟಕ-ತಮಿಳುನಾಡು ಗಡಿ ಭಾಗವಾದ ಸತ್ಯಮಂಗಲಂ ಪ್ರದೇಶ ಅಭಯಾರಣ್ಯದಿಂದ ಕೂಡಿದೆ. ಈ ಭಾಗದಲ್ಲಿ ವನ್ಯಜೀವಿಗಳ ಸಂತತಿಯಿದ್ದು, ಆನೆಗಳ ಸಂಖ್ಯೆ ಹೆಚ್ಚಿದೆ. ಈ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವನ್ಯಜೀವಿಗಳ ದರ್ಶನವಾಗುವುದು ಸಹಜ..
ಅದರಲ್ಲೂ ಆನೆಗಳು ಆಹಾರವನ್ನು ಹುಡುಕಿಕೊಂಡು ಸತ್ಯಮಂಗಲಂ ಭಾಗದಲ್ಲಿ ಸಂಚರಿಸುತ್ತವೆ. ಜನರು ಕೂಡಾ ಕಾಡಿನ ದಾರಿಯಲ್ಲಿ ಅರಣ್ಯ ಇಲಾಖೆಯ ಸೂಚನೆಯನ್ನು ಧಿಕ್ಕರಿಸಿ ವನ್ಯ ಪ್ರಾಣಿಗಳಿಗೆ ಆಹಾರ ನೀಡುತ್ತಾರೆ. ಕಳೆದ ಐದು ತಿಂಗಳಿನಿಂದ ಆನೆಗಳ ಸಂತತಿ ಹೆಚ್ಚಿರುವ ಸತ್ಯಮಂಗಲಂ ಪ್ರದೇಶದ ಆನೆಗಳಿಗೆ ಕಬ್ಬಿನ ರುಚಿ ಸಿಕ್ಕಿದೆ. ಹೀಗಾಗಿ ಆನೆಗಳು ಇದೀಗ ಹೆಚ್ಚಾಗಿ ರಸ್ತೆ ಮಧ್ಯೆ ಕಾಣಿಸಿಕೊಳ್ಳುತ್ತಿವೆ. ತಾಳವಾಡಿ ಮತ್ತು ಕರ್ನಾಟಕದಿಂದ ಸತ್ಯಮಂಗಲಂ ಮಾರ್ಗವಾಗಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬಿನಿ ಲಾರಿಗಳು ಸಂಚರಿಸುತ್ತವೆ.
ಕಬ್ಬು ತುಂಬಿಕೊಂಡು ಸಂಚರಿಸುವ ಕೆಲವು ಲಾರಿಗಳು ರಸ್ತೆ ಮಧ್ಯೆ ಆನೆಗಳಿಗೆ ಕಬ್ಬು ನೀಡಿವೆ. ಇದರಿಂದಾಗಿ ಆನೆಗಳಿಗೆ ಕಬ್ಬಿನ ರುಚಿ ಲಭಿಸಿದ್ದು, ರಸ್ತೆ ಪರಿಸರದಲ್ಲೇ ಹೆಚ್ಚು ಓಡಾಡಿಕೊಂಡಿವೆ. ಇದು ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಇದೀಗ ತಮಿಳುನಾಡಿನ ಅರಣ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮ ವಹಿಸಲು ಮುಂದಾಗಿದೆ. ಆಸನೂರು ಭಾಗದ ಅರಣ್ಯಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ಯಾಟ್ರೋಲಿಂಗ್ ನಡೆಸುತ್ತಿದ್ದಾರೆ. ಈ ವೇಳೆ ಕಬ್ಬಿನ ಲಾರಿಯ ಮೇಲೆ ನಿಂತು ಆನೆಗೆ ಕಬ್ಬು ಎಸೆಯುತ್ತಿದ್ದ ಕರ್ನಾಟಕದ ಲಾರಿ ಚಾಲಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆತನನ್ನು ವಿಚಾರಣೆ ನಡೆಸಿ, 75,000 ರೂ. ದಂಡ ವಿಧಿಸಿದ್ದಾರೆ. (ಏಜೆನ್ಸೀಸ್)