ಸುಳ್ಳುಗಳನ್ನು ಹೇಳುತ್ತಾರೆಂಬ ಆರೋಪಗಳಿಗೆ ಗುರಿಯಾಗಿರುವ ಬಲಪಂಥೀಯ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಯವರಿಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಸಚಿವರು, “ಸಮಾಜದಲ್ಲಿ ಕೋಮು ಭಾವನೆ ಸೃಷ್ಟಿಸುವ ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯದು” ಎಂದಿದ್ದಾರೆ.
ಮೈಸೂರಿನಲ್ಲಿ ಆಯೋಜಿಸಲಾಗಿದ್ದ ವಿ.ಡಿ.ಸಾವರ್ಕರ್ ಜಯಂತಿಯಲ್ಲಿ ಮಾತನಾಡಿದ್ದ ಸೂಲಿಬೆಲೆ, ರಾಜ್ಯದಲ್ಲಿ ಹಿಟ್ಲರ್ ಸರ್ಕಾರವಿದೆ” ಎಂದಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಎಂ.ಬಿ.ಪಾಟೀಲ್, “ಬಿಜೆಪಿ ಸರ್ಕಾರದಲ್ಲಿ ಹಿಜಾಬ್, ಹಲಾಲ್, ಉರಿಗೌಡ ಅಂತೆಲ್ಲ ಸಮಾಜದಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ ಬಿಜೆಪಿ, ರಾಜ್ಯದ ಅಭಿವೃದ್ಧಿ ಕಡೆಗಣಿಸಿತು” ಎಂದು ಟೀಕಿಸಿದ್ದಾರೆ.
“ರೋಸಿಹೋದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಮಾಧ್ಯಮಗಳೂ ಸೇರಿದಂತೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಅದ್ಭುತ ಬಹುಮತದ ಸರ್ಕಾರ ರಚನೆಗೆ ಮತದಾರ ಪ್ರಭುಗಳು ಆಶೀರ್ವಾದ ಮಾಡಿದ್ದಾರೆ. ನಮ್ಮ ಸರ್ಕಾರ ಎಲ್ಲ ಸಮುದಾಯಗಳ ರಕ್ಷಣೆ ವಿಷಯದಲ್ಲಿ ವಿಶೇಷ ಕಾಳಜಿ ತೋರಲಿದೆ” ಎಂದು ತಿಳಿಸಿದ್ದಾರೆ.
“ಗೋಹತ್ಯೆ ನಿಷೇಧ ಕಾನೂನು, ಮುಸ್ಲಿಮರಿಂದ ಕಿತ್ತುಕೊಂಡ ಶೇ.4 ಮೀಸಲಾತಿ, ಮತಾಂತರ ನಿಷೇಧ ಕಾನೂ ಹಿಂಪಡೆಯುವುದು ಸೇರಿದಂತೆ ಅಹಿಂದ ಸಂಘಟನೆಯ ಬೇಡಿಕೆ ಈಡೇರಿಸುವ ಕುರಿತು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
“ಈ ಹಿಂದೆ ನಾಲ್ಕು ವರ್ಷ ಸೂಲಿಬೆಲೆ ಅನಾಹುತ ಮಾಡಿದ್ದಾರೆ. ಸೂಲಿಬೆಲೆ ಮಾಡಿದ ಅನಾಹುತಗಳನ್ನ ಈಗ ನಾವು ಸರಿಪಡೆಸುತ್ತಿದ್ದೇವೆ. ಅಲ್ಲದೇ, ಪಠ್ಯಪುಸ್ತಕ, ಹಿಜಾಬ್, ಹಲಾಲ್, ಅಝಾನ್ ಅಂತ ನಾಟಕ ಮಾಡಿದ್ದಾರೆ. ಇದಕ್ಕೆಲ್ಲ ಇತಿಶ್ರೀ ಹಾಡುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಕೇಸರಿ ಬಣ್ಣ ಬರೀ ಬಿಜೆಪಿಯವರು ಗುತ್ತಿಗೆ ಪಡೆದಿಲ್ಲ. ನಮ್ಮ ದೇವಸ್ಥಾನಗಳ ಮೇಲೆ ಕೇಸರಿ ಧ್ವಜವನ್ನೇ ಹಾರಿಸಲಾಗುತ್ತದೆ. ನಮ್ಮ ಮನೆಯಲ್ಲೂ ಕೇಸರಿ ಬಣ್ಣ ಬಳಕೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಶನಿವಾರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೂಲಿಬೆಲೆ, “ಇಂದಿನ ಕಾರ್ಯಕ್ರಮ ಇಲ್ಲ, ರದ್ದಾಗಲಿದೆ ಎಂದು ನಾವು ತಿಳಿದಿದ್ದೆವು. ಇದಕ್ಕೆ ಹಲವರು ಕಾರಣಗಳು ಇವೆ. ಸಾಹಿತಿ ಎಸ್.ಎಲ್.ಭೈರಪ್ಪ, ನಾನು ಇದ್ದೇವೆ ಎಂದು ರದ್ದು ಪಡಿಸುವ ಕೆಲಸವಾಗಿದೆ” ಎಂದಿದ್ದರು.
“ಸಾವರ್ಕರ್ ಕಾರ್ಯಕ್ರಮದ ಬಗ್ಗೆ ಸರ್ಕಾರಕ್ಕೆ ಭಯ ಇರಬಹುದು. ಅಧಿಕಾರಕ್ಕೆ ಬಂದು ಒಂದು ವಾರವಾಗಿಲ್ಲ. ಅಷ್ಟರಲ್ಲಿ ಸಾವರ್ಕರ್ ಜಯಂತಿ ರದ್ದು ಮಾಡಲು ಹೊರಟಿದ್ದಾರೆ. ಇದು ಹಿಟ್ಲರ್ ಸರ್ಕಾರ. ಸಾವರ್ಕರ್ ಇವತ್ತಿಗೂ ಪ್ರಸ್ತುತ ಹಾಗೂ ಜೀವಂತ” ಎಂದು ಅಭಿಪ್ರಾಯಪಟ್ಟಿದ್ದರು.