ಅಕ್ರಮ ಖಾತೆ ಮಾಡಿಕೊಡಲು 1 ಕೋಟಿ ಲಂಚ: ಪ್ರಶ್ನಿಸಿ RTI ಅರ್ಜಿ ಹಾಕಿದ ಹೋರಾಟಗಾರರಿಗೆ ಜೀವ ಬೆದರಿಕೆ ಆರೋಪ

 

ಬೆಂಗಳೂರಿನ ಉತ್ತರಹಳ್ಳಿ ಬಳಿ ಅಕ್ರಮ ಖಾತೆ ಮಾಡಿ ನಿರ್ಮಿಸಿಲಾಗುತ್ತಿರುವ ಲೇಔಟ್ ಕುರಿತು RTI ಅರ್ಜಿ ಹಾಕಿದ ಹೋರಾಟಗಾರರಿಗೆ ಕಂದಾಯ ನಿರೀಕ್ಷಕ ಅಧಿಕಾರಿ ಜೀವ ಬೆದರಿಕೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಪ್ರಜಾ ನ್ಯಾಯ ವೇದಿಕೆ ಹೋರಾಟಗಾರರು ಬಿಬಿಎಂಪಿ ಆಯುಕ್ತರ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಉತ್ತರಹಳ್ಳಿ ಹೋಬಳಿಯ ವಸಂತಪುರ ಗ್ರಾಮದ ಸರ್ವೇ ನಂ 15/2, 15/3, 16ರಲ್ಲಿ 5 ಎಕರೆ 22 ಗುಂಟೆ ಜಮೀನಿನಲ್ಲಿ ಕರ್ನಾಟಕ ಕಂಟ್ರಿ ಅಂಡ್ ಟೌನ್ ಪ್ಲಾನಿಂಗ್ ಆಕ್ಟ್ 1961ರ ಅನ್ವಯ ಅಪ್ರುವಲ್ ಪಡೆಯದೇ ಲೇಔಟ್ ನಿರ್ಮಿಸುತ್ತಿದ್ದಾರೆ. ಉತ್ತರಹಳ್ಳಿ ಉಪ ವಿಭಾಗದ ಕಂದಾಯ ನಿರೀಕ್ಷಕ ಅಧಿಕಾರಿ ಲಂಚ ಪಡೆದು 93 ನಿವೇಶನಗಳಿಗೆ ಎ ಖಾತೆ ನೀಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಬಿ.ಎಚ್ ವಿರೇಶ್ ಆರೋಪಿಸಿದ್ದಾರೆ. ಈ ಕುರಿತು ಮಾಹಿತಿ ಒದಗಿಸುವಂತೆ ಕಳೆದ ಏಪ್ರಿಲ್‌ನಲ್ಲಿ ಅವರು ಹಳ್ಳಿ ಮಕ್ಕಳ ಸಂಘದ ಹೋರಾಟಗಾರ ನಾಗೇಶ್ವರ ರಾವ್‌ ಜೊತೆಗೂಡಿ ಅರ್ಜಿ ಸಹ ಸಲ್ಲಿಸಿದ್ದರು. ಆಗ ಕಂದಾಯ ನಿರೀಕ್ಷಕ ವೆಂಕಟೇಶ್ ಎಂಬುವವರು ನಾಗೇಶ್ವರ ರಾವ್‌ರವರಿಗೆ ಅರ್ಜಿ ಹಿಂತೆಗೆದುಕೊಳ್ಳಿ, ಇಲ್ಲಿದಿದ್ದರೆ ನಿಮ್ಮನ್ನು ಬದುಕಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾನೂನುಬಾಹಿರವಾಗಿ ಎ ಖಾತೆ ಮಾಡಿಕೊಡಲು ವೆಂಕಟೇಶ್ ಒಂದು ಕೋಟಿ ರೂ ಲಂಚ ಪಡೆದಿದ್ದಾರೆ. ಹಾಗಾಗಿ ವಿಚಾರದ ಕುರಿತು ನ್ಯಾಯ ಸಮ್ಮತ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಅನಧಿಕೃತ ಲೇಔಟ್‌ಗಳು ನಿರ್ಮಾಣವಾಗಬಾರದು ಎಂದು ಒತ್ತಾಯಿಸಿ ಪ್ರಜಾನ್ಯಾಯ ವೇದಿಕೆಯ ಹೋರಾಟಗಾರರು ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿ ಮುಂದೆ ಹೋರಾಟ ಆರಂಭಿಸಿದ್ದಾರೆ.

ಬಿಬಿಎಂಪಿಯಲ್ಲಿ‌ ಅಕ್ರಮ‌ ಮತ್ತು ಭ್ರಷ್ಟಾಚಾರವನ್ನು ಪ್ರಶ್ನಿಸಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿಯನ್ನು ಹಾಕಿದ್ದರು ಎಂಬ ಒಂದೇ ಒಂದು ಕಾರಣಕ್ಕೆ ಜೀವ ಬೆದರಿಕೆ ಒಡ್ಡಿರುವ ಕಂದಾಯ ನಿರೀಕ್ಷಕನ ವಿರುದ್ಧ ತ್ವರಿತವಾಗಿ ಹಾಗೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ. ಆಯುಕ್ತರಾದ ತುಷಾರ್ ಗಿರಿನಾಥ್‌ರವರು ಸ್ಥಳಕ್ಕೆ ಬಾರದಿರುವುದರಿಂದ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ವೇದಿಕೆಯ ಆದರ್ಶ್ ಅಯ್ಯರ್ ತಿಳಿಸಿದ್ದಾರೆ.

Previous Post Next Post

Ads

Ads

نموذج الاتصال

×